Publish Date: Sun, 15 Feb 2026 (16:43 IST)
Updated Date: Sun, 15 Feb 2026 (16:45 IST)
ಮಂಡ್ಯ: ತಾಲ್ಲೂಕಿನ ಬಸರಾಳು ಹೋಬಳಿಯ ಕಾರೇಕಟ್ಟೆ ಗ್ರಾಮದ ಸಮೀಪ ಕೀರ್ತಿ ಕೆಮಿಕಲ್ ಕಾರ್ಖಾನೆಯನ್ನು ಸ್ಥಳಾಂತರ ವೇಳೆ ಕೆಮಿಕಲ್ ಟ್ಯಾಂಕ್ ಸ್ಫೋಟಗೊಂಡು ಬಿಹಾರ ಮೂಲದ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತರನ್ನು ಬಿಹಾರ ಮೂಲದ ಕಲೂಹ್‌ಖಾನ್ (27) ಮತ್ತು ಅಶೋಕ್ (26) ಎಂದು ಗುರುತಿಸಲಾಗಿದೆ.
ಟ್ಯಾಂಕ್ ಸ್ಫೋಟಗೊಂಡ ತೀವ್ರತೆಗೆ ಇಬ್ಬರು ಕಾರ್ಮಿಕರ ದೇಹಗಳು ಛಿದ್ರಛಿದ್ರವಾಗಿವೆ. ಇನ್ನೂ ಈ ಘಟನೆಯಲ್ಲಿ ಖಾಸಿಂ, ರವಿ, ಮಹಾಂತೇಶ್, ರಾಜೀವ್‌ಕುಮಾರ್ ಈ ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡು ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರೇಕಟ್ಟೆಯಲ್ಲಿರುವ ಕಾರ್ಖಾನೆಯ ಸಾಮಗ್ರಿಗಳನ್ನು ಬೇರೆ ಕಡೆಗೆ ಸಾಗಿಸುವ ಕಾರ್ಯ ಒಂದು ತಿಂಗಳಿನಿಂದ ನಡೆಯುತ್ತಿತ್ತು. ಭಾನುವಾರ ರಾಸಾಯನಿಕ ಟ್ಯಾಂಕ್ ತೆರವು ಮಾಡುವ ವೇಳೆ ದುರ್ಘಟನೆ ಸಂಭವಿಸಿದೆ.
ಇದೇ ಕಾರ್ಖಾನೆಯಲ್ಲಿ 4 ವರ್ಷಗಳ ಹಿಂದೆ (2022ರಲ್ಲಿ) ವಿಷಾನಿಲ ಸೋರಿಕೆಯಾಗಿ ನೂರಾರು ಎಕರೆ ಬೆಳೆ ಹಾನಿಯಾಗಿತ್ತು ಮತ್ತು ಎರಡು ನಾಯಿಗಳು ಸಾವನ್ನಪ್ಪಿದ್ದವು. ಅದಲ್ಲದೆ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಿತ್ತು.
ಬಳಿಕ ಕಾರ್ಖಾನೆ ಆರಂಭಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಹಾನಿಯಾದ ಬೆಳೆಗೆ ಮಂಡ್ಯ ಜಿಲ್ಲಾಡಳಿತ ಕಾರ್ಖಾನೆಯವರಿಂದ ಪರಿಹಾರ ಕೊಡಿಸಿತ್ತು. ಈವರೆಗೆ ಕಾರ್ಖಾನೆ ಅಧಿಕೃತವಾಗಿ ಆರಂಭವೇ ಆಗಿರಲಿಲ್ಲ. ಹೀಗಾಗಿ ಕಾರ್ಖಾನೆಯನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲು ಮಾಲೀಕರು ಮುಂದಾಗಿದ್ದರು.
Sampriya
Publish Date: Sun, 15 Feb 2026 (16:43 IST)
Updated Date: Sun, 15 Feb 2026 (16:45 IST)