ದುಬಾರಿ ಬೆಲೆಯ ಬಿಎಂಡಬ್ಲ್ಯೂ ಕಾರನ್ನು ಕಾವೇರಿ ನದಿಯಲ್ಲಿ ಮುಳುಗಿಸಿ ವ್ಯಕ್ತಿಯೊಬ್ಬ ನಾಪತ್ತೆಯಾದ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ನಿಮಿಷಾಂಭ ದೇವಸ್ಥಾನದ ಬಳಿ ನಡೆದಿದೆ.
ಶ್ರೀರಂಗಪಟ್ಟಣದ ಗಂಜಾಂನ ನಿಮಿಷಾಂಭ ದೇವಸ್ಥಾನದ ಕಾವೇರಿ ನದಿಯಲ್ಲಿ ಕಾರು ಮುಳುಗಿರುವುದನ್ನು ಕಂಡು ಆಶ್ಚರ್ಯಗೊಂಡ ಸ್ಥಳೀಯರು ಶ್ರೀರಂಗಪಟ್ಟಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ನದಿಯಲ್ಲಿ ಇದ್ದ ಕಾರನ್ನು ಹೊರಕ್ಕೆ ತೆಗೆದಿದ್ದಾರೆ.
ಶ್ರೀರಂಗಪಟ್ಟಣದ ಪಟ್ಟಣ ಪೊಲೀಸ್ ಠಾಣೆಗೆ ಕಾರನ್ನು ತೆಗೆದುಕೊಂಡು ಹೋದ ಪೊಲೀಸರು ಕಾರಿನ ಬಾಗಿಲು ತೆಗೆದು ಹುಡುಕಿದಾದ ದಾಖಲೆ ಪತ್ರಗಳು ಸಿಕ್ಕಿದ್ದು, ಇದು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‍ನ ರೂಪೇಶ್ ಅವರಿಗೆ ಸೇರಿದ ಕಾರು ಎಂದು ತಿಳಿದುಬಂದಿದೆ.
ಪೊಲೀಸರು ವಿಚಾರಣೆ ನಡೆಸಿದ ವೇಳೆ, ಕಾರು ಮಾಲೀಕ ರೂಪೇಶ್ ಕಾರನ್ನು ನೀರಿನಲ್ಲಿ ಮುಳುಗಿಸಿದ್ದರ ಬಗ್ಗೆ ಒಪ್ಪಿಕೊಂಡಿದ್ದಾನೆ. ರೂಪೇಶ್ ತಾಯಿ ಕೆಲ ದಿನಗಳ ಹಿಂದೆ ಸಾವನ್ನಪ್ಪಿದ್ದರು, ಅಂದಿನಿಂದ ಇಂದಿನವರೆಗೆ ಆತನ ವರ್ತನೆ ಸರಿ ಇಲ್ಲ, ಮಾನಸಿಕ ಖಿನ್ನತೆಗೆ ಒಳಗಾಗಿದ್ದಾನೆ ಎಂದು ರೂಪೇಶ್ ಸಂಬಂಧಿಕರು, ಸ್ನೇಹಿತರು ಹೇಳಿದ್ದಾರೆ. ಅಲ್ಲದೇ ಆತ ಪೊಲೀಸ್ ಠಾಣೆಗೆ ಬಂದಾಗಿನಿಂದಲೂ ಸರಿಯಾಗಿ ವರ್ತನೆ ಮಾಡುತ್ತಿರಲಿಲ್ಲ. ಆತನಿಗೆ ಮಾನಸಿಕ ಖಿನ್ನತೆ ಇರುವ ಕಾರಣ ಹೀಗೆ ಮಾಡಿರಬಹುದು ಎಂದು ಹೇಳುತ್ತಿದ್ದಾರೆ.