ಜಿಲ್ಲೆಯ ಗಡಿಗ್ರಾಮ ಚನ್ನಪಟ್ಟಣ ತಾಲೂಕಿನ ಗೌಡಗೆರೆಯ ಪ್ರಸಿದ್ದ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯಕ್ಷೇತ್ರದಲ್ಲಿ ಜು. 31ರಂದು ಮಹಾಮಸ್ತಕಾಭಿಷೇಕ ಜರುಗಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಜಿ.ಬಿ.ಮಲ್ಲೇಶ್ ತಿಳಿಸಿದ್ದಾರೆ.
60 ಅಡಿ ಎತ್ತರದ ಸೌಮ್ಯ ಸ್ವಭಾವದ ಶ್ರೀ ಚಾಮುಂಡೇಶ್ವರಿ ಲೋಹದ ವಿಗ್ರಹ 2021ರ ಆಗಸ್ಟ್ 8ರಂದು ಉದ್ಘಾಟನೆಗೊಂಡಿತ್ತು.
ಜು.29ರಿಂದಲೇ ಲೋಕಕಲ್ಯಾಣಾರ್ಥ ಚಂಡಿಕಾಹೋಮ ಆಯೋಜನೆಗೊಂಡಿದ್ದು, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಭಾಗಿಯಾಗಲಿದ್ದಾರೆ. ಜು. 30ರಂದು ಚಾಮುಂಡೇಶ್ವರಿ ದೇವಿಗೆ ಹೂವು- ಹೊಂಬಾಳೆಯಿಂದ ಸಿಂಗರಿಸಿ ಮೆರವಣಿಗೆ ನಡೆಸಲಾಗುವುದು. ಜು. 31ರಂದು ಮಹಾಮಸ್ತಕಾಭಿಷೇಕ ನಡೆಯಲಿದ್ದು, ಕಾರ್ಯಕ್ರಮದ ಸಾನ್ನಿಧ್ಯವನ್ನು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ, ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಶ್ರೀ ಅನ್ನದಾನೇಶ್ವರ ಸ್ವಾಮೀಜಿ, ಮಲ್ಲಿಕಾರ್ಜುನ ಮಠದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಭಾಗವಹಿಸುವರು.
ಧಾರ್ಮಿಕ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮೈಸೂರು ರಾಜಮನೆತನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದ ಡಿ.ಕೆ.ಸುರೇಶ್, ಚಿತ್ರನಟರಾದ ಶಿವರಾಜ್‌ಕುಮಾರ್, ಸುದೀಪ್ ಆಗಮಿಸಲಿದ್ದಾರೆ ಎಂದು ವಿವರಿಸಿದ್ದಾರೆ.