ರಾಜ್ಯ ಸರ್ಕಾರವು ಪಠ್ಯಪುಸ್ತಕಗಳಲ್ಲಿ ಭಗವದ್ಗೀತೆ ಸೇರಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕು, ಜಾತ್ರೆಗಳಲ್ಲಿ ಮುಸ್ಲಿಂ ಧರ್ಮಕ್ಕೆ ಸೇರಿದ ವ್ಯಾಪಾರಿಗಳಿಗೂ ಅವಕಾಶ ಇರಬೇಕು ಎಂದು ಕರ್ನಾಟಕದ ಬುದ್ಧಿಜೀವಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಹಿಜಾಬ್ ಧರಿಸಿ ಮಕ್ಕಳು ಪರೀಕ್ಷೆ ಬರೆಯಲು ಅವಕಾಶ ನೀಡಲಿ. ಮುಸ್ಲಿಂ ವ್ಯಾಪಾರಿಗಳಿಗೆ ತೊಂದರೆ ಕೊಡದಂತೆ ಕಾನೂನು ತಿದ್ದುಪಡಿ ಮಾಡಬೇಕು ಎಂದು ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ಸಾಹಿತಿಗಳಾದ ಡಾ.ಕೆ.ಮರುಳಸಿದ್ದಪ್ಪ, ಎಸ್.ಜಿ.ಸಿದ್ದರಾಮಯ್ಯ, ಬೋಳುವಾರ್ ಮಹಮ್ಮದ್ ಕುಂಞ, ಬಂಜಗೆರೆ ಜಯಪ್ರಕಾಶ್, ರಹಮತ್ ತರೀಕೆರೆ ಸೇರಿದಂತೆ 61 ಬುದ್ಧಿಜೀವಿಗಳು ಪತ್ರ ಬರೆದು ಆಗ್ರಹಿಸಿದ್ದಾರೆ. ಭಗವದ್ಗೀತೆಗಿಂತಲೂ ಸಂವಿಧಾನವನ್ನು ನಮ್ಮ ಮಕ್ಕಳು ಓದಬೇಕು. ಅದಕ್ಕೆ ಹೆಚ್ಚು ಪ್ರಾಮುಖ್ಯತೆ ಸಿಗಬೇಕು ಎಂದು ಸಾಹಿತಿಗಳು ಪತ್ರದಲ್ಲಿ ಒತ್ತಾಯಿಸಿದ್ದಾರೆ.