ಪುಣ್ಯಕೋಟಿ ನಾಡಿನಲ್ಲಿ ಗ್ಯಾರಂಟಿ ಕಾರ್ಡ್ ಹಿಡಿದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ತಾವು ನುಡಿದಂತೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಷರತ್ತು ರಹಿತವಾಗಿ ಜಾರಿಗೆ ತರುವ ಮೂಲಕ ಜನರ ಆಶೋತ್ತರಗಳನ್ನು ಈಡೇರಿಸಬೇಕೆಂದು ಮಾಜಿ ಸಚಿವ, ಶಾಸಕ ಸಿ.ಸಿ.ಪಾಟೀಲ್ ಆಗ್ರಹಿಸಿದರು. ಗದಗದ ನರಗುಂದದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ಸಚಿವರಲ್ಲಿಯೇ ಅಪಸ್ವರ ಇದೆ. ಷರತ್ತುಗಳನ್ನು ಹಾಕದೇ ಗ್ಯಾರಂಟಿ ಯೋಜನೆಗಳನ್ನು ನೀಡಬೇಕು. ಅತಿಯಾದ ಕಂಡಿಷನ್ ಹಾಕಿದರೆ ಯೋಜನೆಗಳಿಂದ ವಂಚಿತರಾದ ಜನರು ಸರ್ಕಾರದ ವಿರುದ್ಧ ದಂಗೆ ಎಳಬಹುದು ಎಂಬ ಎಚ್ಚರಿಕೆ ನೀಡಿದರು. ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಯಾವುದೇ ಷರತ್ತುಗಳಿಲ್ಲದೇ ಐದು ಯೋಜನೆಗಳನ್ನು ಗ್ಯಾರಂಟಿ ಕೊಡುತ್ತೇವೆಂದು ಹೇಳಿದ್ದರು. ಆದರೆ ಈಗ ಮೇಲಿಂದ ಮೇಲೆ ಷರತ್ತುಗಳನ್ನು ಹಾಕುತ್ತಾ ಮತ ನೀಡಿದ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆಂದು ಖಂಡಿಸಿದರು.