ಬೆಳಗಾವಿ ನಗರದ ಗಾಲ್ಫ್ ಮೈದಾನದಲ್ಲಿ ಕಾಣಿಸಿಕೊಂಡಿರುವ ಚಿರತೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಇಂದೂ ಸಹ ಮುಂದುವರಿದಿದೆ. ಅರಣ್ಯ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿ ಜಂಟಿ ಕಾರ್ಯಾಚರಣೆ ಆರಂಭಿಸಿದ್ದು, ಹೆಚ್ಚುವರಿಯಾಗಿ ಇಬ್ಬರು ಶೂಟರ್ಗಳೂ ಪಾಲ್ಗೊಂಡಿದ್ದಾರೆ. ಚಿರತೆ ಸೆರೆ ಕಾರ್ಯಾಚರಣೆಗೆ ನೆರವಾಗಲೆಂದು ಸಂಜೆ ವೇಳೆಗೆ ಸಕ್ರೆಬೈಲ್‌ನಿಂದ ಆನೆಗಳು ಬರುವ ಸಾಧ್ಯತೆಯಿದೆ. 250 ಎಕರೆ ಪ್ರದೇಶ ವಿಸ್ತೀರ್ಣದ ಗಾಲ್ಫ್ ಮೈದಾನದಿಂದ ಚಿರತೆ ನಾಪತ್ತೆಯಾಗಿದ್ದು, ಹುಡುಕಾಟ ಮುಂದುವರಿದಿದೆ. ನಿನ್ನೆ ಎರಡು ಬಾರಿ ಚಿರತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಆನೆಗಳು ಬಂದ ನಂತರ ಆನೆಗಳ ನೆರವಿನೊಂದಿಗೆ ಮತ್ತೊಮ್ಮೆ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಲಿದ್ದಾರೆ. ಗಾಲ್ಫ್ ಮೈದಾನಕ್ಕೆ ಬಂದಿರುವ ಹಂದಿ ಹಿಡಿಯುವ ಯುವಕರು ಸುಮಾರು 20 ನಾಯಿಗಳನ್ನು ಕರೆತಂದಿದ್ದಾರೆ. ನಾಯಿಗಳ ನೆರವಿನೊಂದಿಗೆ ಅವರೂ ಶೋಧ ಕಾರ್ಯಾಚರಣೆ ನಡೆಸಿದ್ದರು. ಚಿರತೆ ಪತ್ತೆಯಾಗದ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಮತ್ತು ಗ್ರಾಮೀಣ ವಲಯದ 22 ಶಾಲೆಗಳಿಗೆ ರಜೆಯನ್ನು ಮುಂದುವರಿಸಲು ತಾಲ್ಲೂಕು ಆಡಳಿತ ನಿರ್ಧರಿಸಿದೆ.