ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಜಂಬೂಸವಾರಿಗೆ ಕ್ಷಣಗಣನೆ ಶುರುವಾಗಿದೆ. ಇದರ ಮಧ್ಯೆ ಮೂರು ದಿನದಿಂದ ಭಾರೀ ಮಳೆಯಾಗುತ್ತಿದೆ. ಇದರ ಪರಿಣಾಮ ಮೈಸೂರು ಅರಮನೆ ಛಾವಣಿ ಸೋರುತ್ತಿದೆ.
ಅಂಬಾವಿಲಾಸ ಅರಮನೆಯ ದರ್ಬಾರ್ ಹಾಲ್ ಮತ್ತು ಕಲ್ಯಾಣ ಮಂಟಪದಲ್ಲಿ ನೀರು ಸೋರುತ್ತಿದ್ದು, ನೆಲಹಾಸುಗಳು ಮಳೆ ನೀರಿನಿಂದ ಒದ್ದೆಯಾಗಿವೆ. ನಾಡಹಬ್ಬ ದಸರಾ ನಡೆಯುತ್ತಿರುವ ಬೆನ್ನಲ್ಲೇ ಅರಮನೆಗೆ ಈ ಸ್ಥಿತಿ ಬಂದಿದೆ. ರತ್ನ ಖಚಿತ ಸಿಂಹಾಸನ ಕೂಡ ದರ್ಬಾರ್ ಹಾಲ್ ನಲ್ಲೇ ಇದೆ. ಸಿಂಹಾಸನ ವೀಕ್ಷಣೆಗೆ ತೆರಳಿದ ಪ್ರವಾಸಿಗರ ಗಮನಕ್ಕೆ ಮಳೆ ನೀರು ಸೋರಿಕೆಯಾಗಿರುವುದು ಕಂಡು ಬಂದಿದೆ ಎನ್ನಲಾಗಿದೆ.
ನಾಡಹಬ್ಬಕ್ಕೆ ಕೋಟ್ಯಂತರ ರೂ. ಖರ್ಚು ಮಾಡುವ ಸರ್ಕಾರಕ್ಕೆ ಅರಮನೆ ಬಗ್ಗೆ ಕಾಳಜಿಯೇ ಇಲ್ಲವೆ ಎಂಬ ಪ್ರಶ್ನೆ ಪ್ರವಾಸಿಗರಲ್ಲಿ ಮೂಡಿದೆ. ದರ್ಬಾರ್ ಹಾಲ್, ಕಲ್ಯಾಣ ಮಂಟಪ ದುರಸ್ಥಿ ಬಗ್ಗೆ ಅರಮನೆ ಮಂಡಳಿಯೂ ಗಮನ ಹರಿಸಿಲ್ಲ ಅನ್ನೋ ಆರೋಪ ಕೇಳಿ ಬಂದಿದೆ.
ಮೈಸೂರು ಅರಮನೆಯಲ್ಲಿ ಮಳೆ ಬಂದಾಗ 3 ರಿಂದ 4 ಕಡೆ ನೀರು ಸೋರುತ್ತಿರುವುದು ನಿಜ. ಅರಮನೆ ದುರಸ್ಥಿ ಮಾಡಿಸಲು ಸಾಧ್ಯವಾಗುತ್ತಿಲ್ಲ ಎಂದು ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಹ್ಮಣ್ಯ ಹೇಳಿದ್ದಾರೆ.
ಮೇಲ್ಛಾವಣಿಯಲ್ಲಿ ಕೆಲವು ಕಡೆ ಗಾಜುಗಳು ಒಡೆದಿವೆ. ಆ ಜಾಗದಿಂದ ಮಳೆ ನೀರು ಬರುತ್ತಿದೆ. ಅವುಗಳಿಗೆ ಟಾರ್ಪಲ್ ಹೊದಿಸಲಾಗಿದೆ. ಗಾಜು ರಿಪೇರಿ ಮಾಡುವವರು ಸಿಗುತ್ತಿಲ್ಲ. ಅರಮನೆ ಮೆಲ್ಛಾವಣಿ ದುರಸ್ಥಿಗೆ ಪ್ರತ್ಯೇಕ ಸಮಿತಿ ರಚಿಸಲಾಗಿದ್ದು, ಲಂಡನ್, ಜೈಪುರ ತಂತ್ರಜ್ಞರನ್ನು ಈ ವಿಚಾರವಾಗಿ ಸಂಪರ್ಕಿಸಲಾಗಿದೆ ಎಂದು ಹೇಳಿದ್ದಾರೆ.