ರಾಜ್ಯದ ಪ್ರತಿಷ್ಠಿತ ಈ ಆಸ್ಪತ್ರೆಯ ಅವ್ಯವಸ್ಥೆಗೆ ಶೀಘ್ರ ಲಗಾಮು ಹಾಕುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಉನ್ನತಮಟ್ಟದ ಅಧಿಕಾರಿಗಳ ಸಭೆಗೆ ವ್ಯವಸ್ಥೆ ಮಾಡಿಸಿ, ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬ್ರಿಮ್ಸ)ಯ ಸುಧಾರಣೆಯ ಬಗ್ಗೆ ಸಮಗ್ರ ಚರ್ಚಿಸಿ, ಇಲ್ಲಿನ ಅವ್ಯವಸ್ಥೆಗೆ ಲಗಾಮು ಹಾಕುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ಹೇಳಿದ್ದಾರೆ.
ನಮಗೆ ಸಾಕಾಗಿ ಹೋಗಿದೆ. ಈ ಆಸ್ಪತ್ರೆಯ ಅವ್ಯವಸ್ಥೆ ನೋಡಿ ನೋಡಿ ಎಂದು ಸಭೆಯಲ್ಲಿದ್ದ ಎಲ್ಲ ಶಾಸಕರು ಇದೆ ವೇಳೆಯಲ್ಲಿ ತಮ್ಮ ಅಸಮಾಧಾನವನ್ನು ಹೊರ ಹಾಕಿದರು. ಬ್ರಿಮ್ಸನ್ನು ಸರಿದಾರಿಗೆ ತರಲು ತಾವು ಈ ವಿಷಯವನ್ನು ಸವಾಲಾಗಿ ಸ್ವೀಕರಿಸುವುದಾಗಿ ಸಚಿವರು ತಿಳಿಸಿದಾಗ, ಸಭೆಯಲ್ಲಿದ್ದ ಎಲ್ಲರೂ ಚಪ್ಪಾಳೆ ತಟ್ಟಿದರು.
ಬ್ರಿಮ್ಸನಲ್ಲಿ 71 ಗ್ರೂಪ್ ಎ, 1 ಗ್ರೂಪ್ ಬಿ, 135 ಗ್ರೂಪ್ ಸಿ, 82 ಗ್ರೂಪ್ ಡಿ ಸೇರಿ 289 ಹುದ್ದೆಗಳು ಹಾಗೂ ಬ್ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಗ್ರೂಪ್ ಎ 12, ಗ್ರೂಪ್ ಬಿ 2, ಗ್ರೂಪ್ ಸಿ 71 ಮತ್ತು ಗ್ರೂಪ್ ಡಿ 15 ಸೇರಿ 100 ಹುದ್ದೆಗಳು ಸೇರಿ ಒಟ್ಟು 389 ಹುದ್ದೆಗಳು ಭರ್ತಿಯಾಗುವುದು ಬಾಕಿ ಇದೆ ಎಂದು ಬ್ರಿಮ್ಸ ನಿರ್ದೇಶಕರು ಪ್ರಾತ್ಯಕ್ಷಿಕೆ ಮೂಲಕ ಸಭೆಗೆ ಮಾಹಿತಿ ನೀಡಿದರು.