ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಳಾವರದ ನಂದಿಕೇಶ್ವರ ಕಾಂಪ್ಲೆಕ್ಸ್ ನಲ್ಲಿ ಡ್ರೀಮ್ಸ್ ಫೈನಾನ್ಸ್ ನಡೆಸಿಕೊಂಡು ಬರುತ್ತಿದ್ದ ಅಜೇಂದ್ರ ಶೆಟ್ಟಿ ಅವರನ್ನು ಜುಲೈ 30ರಂದು ಕಚೇರಿಯ ಒಳಗೆಯೇ ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು.
ಕೊಲೆ ನಂತರ ಕುತ್ತಿಗೆಯಲ್ಲಿದ್ದ ಚೈನ್ ಹಾಗೂ ಹೊಸ ಹೋಂಡಾ ಸಿಟಿ ಕಾರನ್ನು ಸುಲಿಗೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂರು ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದು, ಪ್ರಾಥಮಿಕ ಹಂತದ ತನಿಖೆಯ ವೇಳೆ ಫೈನಾನ್ಸ್ ಪಾಲುದಾರ ಅನೂಪ್ ಶೆಟ್ಟಿಯ ಮೇಲೆ ಸಂಶಯಗೊಂಡಿದ್ದರು.
ಅನೂಪ್ ಶೆಟ್ಟಿ ವಿಚಾರಣೆಗೆ ಮುಂದಾದಾಗ ಆತ ತಲೆಮರೆಸಿಕೊಂಡಿದ್ದು, ಪೊಲೀಸರ ಅನುಮಾನ ಹೆಚ್ಚಿಸಿತು. ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾಗಲು ಯತ್ನಿಸಿದ್ದ ಆರೋಪಿ ಅನೂಪ್ ಶೆಟ್ಟಿಯನ್ನು ಟೋಲ್ ಗೇಟ್ ನಲ್ಲಿ ಅಳವಡಿಸಿದ್ದ ಸಿಸಿಟಿವಿ ಆಧಾರದ ಮೇಲೆ ಪತ್ತೆ ಹಚ್ಚಿದ್ದು ಗೋವಾದಲ್ಲಿ ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಒಪ್ಪಿಕೊಂಡಿದ್ದಾನೆ.
ಗೋವಾದ ಕೊಲ್ವಾ ಬೀಚ್ ಬಳಿ ಪೊಲೀಸರು ಬಂಧಿಸಿದ್ದಾರೆ. ಮಾತ್ರವಲ್ಲದೇ ಆತ ಸುಲಿಗೆ ಮಾಡಿರುವ ಕಾರನ್ನು ವಶಪಡಿಸಿಕೊಂಡಿದ್ದಾರೆ. ಫೈನಾನ್ಸ್ ನಲ್ಲಿ ಹಣದ ವ್ಯವಹಾರವೇ ಕೊಲೆಗೆ ಮುಖ್ಯ ಕಾರಣ ಹಾಗೂ ಹೊಸ ಖರೀದಿ ವೇಳೆ ಉಂಟಾದ ಮನಸ್ತಾಪದಿಂದ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.