ಬೆಂಗಳೂರು: ಮುಡಾ ಹಗರಣದಲ್ಲಿ ಎ2 ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಬಗ್ಗೆ ಬಿಜೆಪಿ ಬಂಡಾಯ ನಾಯಕ ಕೆಎಸ್ ಈಶ್ವರಪ್ಪ ಮತ್ತೆ ಅನುಕಂಪ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು ಅವರ ಪತ್ನಿ ಪಾರ್ವತಿ ಮುಗ್ದೆ ಎಂದಿದ್ದಾರೆ.
ತನಿಖೆಗೆ ಆದೇಶ ಕೊಟ್ಟಾಗ ಮೇಲ್ನೋಟಕ್ಕೆ ಅವರು ತಪ್ಪಿತಸ್ಥರು ಎಂದು ಗೊತ್ತಾಗುತ್ತದೆ. ಹಾಗಿರುವಾಗ ನೀವು ಮುಕ್ತವಾಗಿ ತನಿಖೆಗೆ ಹೋಗಿ. ಅದು ಬಿಟ್ಟು ಹತ್ತು ಸಾರಿ ನಾನು ತಪ್ಪು ಮಾಡಿಲ್ಲ ಎನ್ನುತ್ತಿದ್ದರೆ ರಾಜ್ಯ ಜನತೆಗೇ ನಿಮ್ಮ ಮೇಲೆ ಅನುಮಾನ ಬರುತ್ತದೆ. ನೀವು ತಪ್ಪು ಮಾಡಿದ್ದೀರಿ ಎಂದಾಗುತ್ತದೆ. ಈಗ ಎಫ್ಐಆರ್ ಆಗಿರುವುದರಿಂದ ನಿಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು.
ಆ ತಾಯಿ ಎಂದೂ ಹೊರಬಂದವರಲ್ಲ. ಅವರು ಮುಗ್ದರು. ನೀವು ಈಗ ಅವರ ಸಹಿ ಹಾಕಿಸಿಕೊಂಡು ಅವರ ಹೆಸರಿನಲ್ಲಿ ಹಲವು ಸೈಟು ಮಾಡಿಸಿಕೊಂಡಿದ್ದೀರಿ. ಹೀಗಾಗಿ ಆ ತಾಯಿಗೆ ಯಾವುದೇ ತೊಂದರೆಯಾಗಬಾರದು ಎಂದು ನನ್ನ ಅಭಿಪ್ರಾಯ ಎಂದು ಈಶ್ವರಪ್ಪ ಹೇಳಿದ್ದಾರೆ.
ಈ ಹಿಂದೆ ನಾನು ಏನೂ ತಪ್ಪು ಮಾಡಿಲ್ಲ. ನನ್ನ ಮೇಲೆ ಎಫ್ಐಆರ್ ಹಾಕಲಾಯಿತು. ಕೊನೆಗೆ ತನಿಖೆಯಾಗಿ ಕ್ಲೀನ್ ಚಿಟ್ ಬಂತು. ಆಗ ನನ್ನ ರಾಜೀನಾಮೆಗೆ ಇದೇ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರು. ನಿಮಗೊಂದು ಕಾನೂನು ನಮಗೊಂದು ಕಾನೂನಾ. ಅದೇ ರೀತಿ ನೀವೂ ಈಗ ಎಫ್ಐಆರ್ ದಾಖಲಾಗಿದ್ದರಿಂದ ರಾಜೀನಾಮೆ ಕೊಡಿ. ತನಿಖೆಯಲ್ಲಿ ನಿರಪರಾಧಿ ಎಂದಾದರೆ ಮತ್ತೆ ಅಧಿಕಾರ ಪಡೆಯಿರಿ ಎಂದು ಈಶ್ವರಪ್ಪ ಸವಾಲು ಹಾಕಿದ್ದಾರೆ.