ಬೆಂಗಳೂರು: ಸಿಎಂ ಯಡಿಯೂರಪ್ಪ ವಿರುದ್ಧ ಸಚಿವ ಕೆಎಸ್ ಈಶ್ವರಪ್ಪ ಹೈಕಮಾಂಡ್ ಮತ್ತು ರಾಜ್ಯಪಾಲರಿಗೆ ದೂರು ನೀಡಿರುವುದು ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಬಿರುಗಾಳಿ ಎಬ್ಬಿಸಿದೆ.
ಸಿಡಿ ಪ್ರಕರಣದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರಕ್ಕೆ ಈಗ ಹಿರಿಯ ಸಚಿವರ ಬಂಡಾಯ ನುಂಗಲಾರದ ಬಿಸಿ ತುಪ್ಪವಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಸಿಎಂ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ದೂರಿದ್ದಾರೆ.
ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ತಮ್ಮ ಗಮನಕ್ಕೆ ಬಾರದೇ ಯಡಿಯೂರಪ್ಪ ಸುಮಾರು 1,299 ಕೋಟಿ ರೂ. ಅನುದಾನವನ್ನು ಶಾಸಕರಿಗೆ ನಿಯಮಬಾಹಿರವಾಗಿ ಬಿಡುಗಡೆ ಮಾಡಿದ್ದಾರೆ ಎಂಬುದು ಈಶ್ವರಪ್ಪ ದೂರು. ತಮ್ಮ ಗಮನಕ್ಕೆ ಬಾರದೇ ಯಡಿಯೂರಪ್ಪನವರು ತಮ್ಮ ಇಲಾಖೆಯಲ್ಲಿ ಮಾಡುತ್ತಿರುವ ಬದಲಾವಣೆ, ನಿರ್ಧಾರಗಳು ಈಶ್ವರಪ್ಪ ಅಸಮಾಧಾನಕ್ಕೆ ಕಾರಣವಾಗಿದೆ.