ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಪ್ತ ಯು.ಬಿ. ಶೆಟ್ಟಿ ಮನೆ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಹೊಸ ವಿಚಾರವೊಂದು ಬಯಲಾಗಿದೆ. ಯು.ಬಿ. ಶೆಟ್ಟಿ ಬಳಿ ದಾಖಲೆ ಇಲ್ಲದ 70 ಕೋಟಿ ಮೌಲ್ಯದ ಆದಾಯ ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅ. 28 ರಂದು ಯು.ಬಿ. ಶೆಟ್ಟಿಗೆ ಸೇರಿದ ಹಲವು ಕಡೆ ದಾಳಿ ನಡೆಸಲಾಗಿತ್ತು. ಉಡುಪಿ, ಧಾರವಾಡದ ಮನೆ, ಮಂಗಳೂರಿನಲ್ಲಿ ಐಟಿ ದಾಳಿ ಮಾಡಲಾಗಿತ್ತು. ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಈ ವೇಳೆ ಸಿವಿಲ್ ಗುತ್ತಿಗೆದಾರನಾಗಿದ್ದ ಡಿ.ಕೆ. ಶಿವಕುಮಾರ್ ಆಪ್ತ ಯು.ಬಿ. ಶೆಟ್ಟಿ ಮನೆಯಲ್ಲಿ ಬೋಗಸ್ ಬಿಲ್ಗಳು, ಎಲೆಕ್ಟ್ರಾನಿಕ್ ಡಿವೈಸ್ಗಳು ಪತ್ತೆಯಾಗಿವೆ. ಉತ್ತರ ಕರ್ನಾಟಕದಲ್ಲಿ ನೀರಾವರಿಗೆ ಕೆಲವು ಪ್ರಾಜೆಕ್ಟ್ ವಹಿಸಿಕೊಂಡಿದ್ದರು. ಪ್ರಾಜೆಕ್ಟ್ ನಿರ್ಮಾಣದ ವೇಳೆ ನಕಲಿ ಬಿಲ್ ತೋರಿಸಿ, ಕಬ್ಬಿಣ ಹಲವು ಸಾಮಗ್ರಿ ಖರೀದಿಸಿ ಹಣ ಮಂಜೂರು ಮಾಡಿಸಿಕೊಳ್ಳಲಾಗಿತ್ತು ಎಂದು ತಿಳಿದುಬಂದಿದೆ. ಶೆಟ್ಟಿ ಕಂಪನಿ ನಕಲಿ ಬಿಲ್ ತೋರಿಸಿ ಹಣ ಮಂಜೂರು ಮಾಡಿಸಿಕೊಂಡಿತ್ತು ಎಂದು ಹೇಳಲಾಗಿದೆ.
ದಾಳಿ ವೇಳೆ ನೈಜವಲ್ಲದ ಕ್ಲೈಮ್‌ಗಳನ್ನು ಸೂಚಿಸುವ ಡಿಜಿಟಲ್ ಪುರಾವೆಗಳು ಹಾಗೂ ವಸ್ತುಗಳ ಮಾರಾಟಗಾರರು ಮತ್ತು ಪೂರೈಕೆದಾರರಂತಹ ಪ್ರಮುಖ ಗುಂಪಿನ ವ್ಯಕ್ತಿಯಿಂದ ಲೆಕ್ಕಕ್ಕೆ ಸಿಗದ ಹಣ ಸೇರಿದಂತೆ ವಿವಿಧ ದಾಖಲೆಗಳನ್ನು ಆದಾಯ ಇಲಾಖೆ ವಶಪಡಿಸಿಕೊಂಡಿದೆ.
ಸಂಸ್ಥೆಯ ಮಾಲೀಕರ ಯಾವುದೇ ಕೆಲಸವನ್ನೂ ಮಾಡದ ಕುಟುಂಬ ಸದಸ್ಯರು, ಸ್ನೇಹಿತರು, ಉದ್ಯೋಗಿಗಳನ್ನೇ ಉಪಗುತ್ತಿಗೆದಾರರ ಹೆಸರಿನಲ್ಲಿ ಹಣ ಪಡೆದು ಲಾಭ ಮರೆಮಾಚುವುದಕ್ಕೆ ಸಹಕರಿಸುತ್ತಿದ್ದರು ಎಂಬುದು ತಿಳಿದು ಬಂದಿದೆ.