ಆಂತರಿಕ ವಿಚಾರಣಾ ಸಮಿತಿಯ ವರದಿ ಶಿಪಾರಸ್ಸಿನಂತೆ ಕೇಂದ್ರ, ರಾಜ್ಯ ಸರ್ಕಾರಗಳ ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ದ ರೈತ, ಕಾರ್ಮಿಕ, ದಲಿತ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿಯಾಗಿರುವ ಸಂಯುಕ್ತ ಹೋರಾಟ-ಕರ್ನಾಟಕ ದಿಂದ ಶ್ರೀ ಕೋಡಿಹಳ್ಳಿ ಚಂದ್ರಶೇಖರ್ ರವರನ್ನು ಹಾಗೂ ಅವರ ನೇತೃತ್ವದ ರೈತ ಸಂಘಟನೆಯನ್ನು ವಜಾಗೊಳಿಸಿದೆ ಎಂದು ಸಂಯುಕ್ತ ಹೋರಾಟ ಕರ್ನಾಟಕ ತಿಳಿಸುತ್ತದೆ.
ಶ್ರೀ ಕೋಡಿಹಳ್ಳಿ ಚಂದ್ರಶೇಖರ್ ಕುರಿತು ಪವರ್ ಟಿವಿ ಮಾಡಿದ್ದ ಆರೋಪಗಳನ್ನು 30-5-2022 ರಂದು ಚರ್ಚಿಸಿದ್ದ ಸಂಯುಕ್ತ ಹೋರಾಟ ಕರ್ನಾಟಕದ ಕೋರ್ ಕಮಿಟಿಯು ಆಂತರಿಕ ವಿಚಾರಣಾ ಸಮಿತಿಯನ್ನು ರಚಿಸಿತ್ತು. ಈ ವಿಚಾರಣಾ ಸಮಿತಿ ಆರೋಪಗಳನ್ನು ಪರಿಶೀಲಿಸಿ ಬಿಜೆಪಿ ಪಕ್ಷದ ಕಡೆಯಿಂದ ಬಂದಿದ್ದೇವೆ ಎಂದು ಹೇಳಿಕೊಂಡಿದ್ದ ತಂಡದ ಜೊತೆ ಸತತ ಒಡನಾಟದಲ್ಲಿದ್ದು ಡೀಲಿನ ಅಮಿಷಕ್ಕೆ ಶ್ರೀ ಕೋಡಿಹಳ್ಳಿ ಚಂದ್ರಶೇಖರ್ ರವರು ಒಳಪಟ್ಟಿರುವುದು ಮತ್ತು ಡೀಲ್ ಒಪ್ಪಿಕೊಂಡಿರುವುದು ತನ್ನ ವಿಚಾರಣೆಯಲ್ಲಿ ಋಜುವಾತಾಗಿದೆ ಹಾಗಾಗಿ ಶ್ರೀ ಕೋಡಿಹಳ್ಳಿ ಚಂದ್ರಶೇಖರ್ ಮತ್ತು ಅವರ ನೇತೃತ್ವದ ರೈತ ಸಂಘಟನೆಯನ್ನು ಈ ಕೂಡಲೇ ಸಂಯುಕ್ತ ಹೋರಾಟ ಕರ್ನಾಟಕದಿಂದ ವಜಾಗೊಳಿಸಬೇಕು ಎಂದು ಶಿಪಾರಸ್ಸು ಮಾಡಿತ್ತು.
ದಿನಾಂಕ 25-6-22 ರಂದು ಸಭೆ ಸೇರಿದ್ದ ಸಂಯುಕ್ತ ಹೋರಾಟ ಕರ್ನಾಟಕ ಸಮನ್ವಯ ಸಮಿತಿ ಈ ಶಿಪಾರಸ್ಸು ಅನ್ನು ಸರ್ವಾನುಮತದಿಂದ ಅಂಗೀಕರಿಸುವ ಮೂಲಕ ಶ್ರೀ ಕೋಡಿಹಳ್ಳಿ ಚಂದ್ರಶೇಖರ್ ರವರನ್ನು ಹಾಗೂ ಅವರ ನೇತೃತ್ವದ ರೈತ ಸಂಘಟನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಿದೆ ಎಂದು ಸಂಯುಕ್ತ ಹೋರಾಟ ಕರ್ನಾಟಕ ತಿಳಿಸುತ್ತದೆ.