Publish Date: Sat, 27 Sep 2025 (08:26 IST)
Updated Date: Sat, 27 Sep 2025 (08:28 IST)
ಬೆಂಗಳೂರು: ರಾಜ್ಯಾದ್ಯಂತ ಕಳೆದ ಎರಡು ಮೂರು ದಿನಗಳಿಂದ ಮಳೆಯಾಗುತ್ತಿದೆ. ಇದೀಗ ವಾರಂತ್ಯದಲ್ಲಿ ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಇಲ್ಲಿದೆ ನೋಡಿ ಹವಾಮಾನ ವರದಿ.
ಕಳೆದ ವಾರ ಮಳೆಯ ಅಬ್ಬರ ಕಡಿಮೆಯಾಗಿತ್ತು. ಆದರೆ ಈ ವಾರ ಕೆಲವು ಜಿಲ್ಲೆಗಳಿಗೆ ವಿಪರೀತ ಮಳೆಯಾಗುತ್ತಿದ್ದರೆ ಉಳಿದ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಅಥವಾ ತುಂತುರು ಮಳೆಯಾಗುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರು ಕೂಡಾ ಇದಕ್ಕೆ ಹೊರತಲ್ಲ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿಯಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಈ ವಾರಂತ್ಯಕ್ಕೆ ಮಳೆ ಇನ್ನಷ್ಟು ತೀವ್ರವಾಗಲಿದೆ ಎಂದು ಹವಾಮಾನ ವರದಿಗಳು ಎಚ್ಚರಿಕೆ ನೀಡಿವೆ. ಮೂಲಗಳ ಪ್ರಕಾರ ಅಕ್ಟೋಬರ್ 1 ರವರೆಗೂ ಮಳೆಯ ಅಬ್ಬರ ಮುಂದುವರಿಯಲಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ವಾರಂತ್ಯದ ಎರಡೂ ದಿನಗಳೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ಕೊಡಗು, ಕೊಪ್ಪಳ, ರಾಯಚೂರು, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಸಾಧ್ಯತೆಯಿದೆ.
ಚಿಕ್ಕಮಗಳೂರು, ಹಾಸನ, ಕೋಲಾರ, ಬೆಂಗಳೂರು, ಮೈಸೂರು, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ದಾವಣಗೆರೆ, ಚಿತ್ರದುರ್ಗ, ಬೀದರ್, ಕಲಬುರಗಿ, ಯಾದಗಿರಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.