ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು 2017-18ನೇ ಹಣಕಾಸು ವರ್ಷದಲ್ಲಿ ನಿವ್ವಳ ಲಾಭ ಗಳಿಸಿದೆ. ಸಂಸ್ಥೆಯು ತನ್ನ ಹಣಕಾಸಿನ ಸ್ಥಿತಿಗತಿಗಳನ್ನು ಕ್ರೋಢೀಕರಿಸಿ ಮಾರ್ಚ್ 2018ರ ಅಂತ್ಯದವರೆಗೆ ಒಟ್ಟು 25.55 ಕೋಟಿ ರೂ.ಗಳ ನಿವ್ವಳ ಲಾಭ ದಾಖಲಿಸಿದೆ ಎಂದು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ಕಳೆದ ವರ್ಷ ಜಾರಿಗೊಂಡ ಸರಕು ಸೇವಾ ತೆರಿಗೆ ಹಾಗೂ ಅನಾಣ್ಯೀಕರಣಗಳ ಪರಿಣಾಮಗಳ ನಡುವೆಯೂ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ಧನಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ. ಸಂಸ್ಥೆಯು ಮಂಜೂರಾತಿಯಲ್ಲಿ ಅಲ್ಪ ಪ್ರಮಾಣದ ಸುಧಾರಣೆಯನ್ನು ಸಾಧಿಸಿದ್ದರೂ ಕೂಡ ಕರ್ನಾಟಕ ಸರ್ಕಾರದ ನೆರವಿನಿಂದಾಗಿ, 842.13 ಕೋಟಿ ರೂ.ಗಳ ಸಾಲ ಮಂಜೂರಾತಿ ನೀಡಿದೆ. 561.21 ಕೋಟಿ ರೂ.ಗಳ ಸಾಲ ವಿತರಣೆ, ಹಾಗೂ 781.91 ಕೋಟಿ ರೂ.ಗಳ ಸಾಲ ವಸೂಲಾತಿಯನ್ನು ಮಾಡಿದೆ. ಸಂಸ್ಥೆಯ ವತಿಯಿಂದ ಮಹಿಳಾ ಉದ್ದಿಮೆದಾರರಿಗೆ 200.84 ಕೋಟಿ ರೂ.ಗಳ ಹಣಕಾಸಿನ ನೆರವನ್ನು ನೀಡಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಉದ್ದಿಮೆದಾರರಿಗೆ 269.20 ಕೋಟಿ ರೂ.ಗಳು ಹಾಗೂ ಮೊದಲ ಪೀಳಿಗೆ ಉದ್ದಿಮೆದಾರರಿಗೆ 77.95 ಕೋಟಿ ರೂ.ಗಳ ಹಣಕಾಸಿನ ನೆರವನ್ನು ನೀಡಿದೆ ಎಂದಿದ್ದಾರೆ.