ಬೆಂಗಳೂರು: ಕರ್ನಾಟಕದ ಮೂರು ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗೆ ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಚನ್ನಪಟ್ಟಣದಲ್ಲಿ ಇಂದು ಡಿಸಿಎಂ ಡಿಕೆ ಶಿವಕುಮಾರ್ ಅಂತಿಮ ಹಂತದ ಪ್ರಚಾರ ನಡೆಸಲಿದ್ದಾರೆ.
ಈ ಬಾರಿ ಉಪಚುನಾವಣೆ ಸಿಎಂ ಸಿದ್ದರಾಮಯ್ಯ-ಡಿಸಿಎಂ ಡಿಕೆ ಶಿವಕುಮಾರ್ ಜೋಡಿಗೆ ಇದು ಪ್ರತಿಷ್ಠೆಯ ಕಣವಾಗಿದೆ. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮೂರಕ್ಕೆ ಮೂರು ಕ್ಷೇತ್ರ ಸೋತರೆ ರಾಜ್ಯ ರಾಜಕೀಯದಲ್ಲೂ ಭಾರೀ ಬದಲಾವಣೆ ನಿರೀಕ್ಷಿಸಬಹುದಾಗಿದೆ.
ಹೀಗಾಗಿ ಇಂದು ಚನ್ನಪಟ್ಟಣದಲ್ಲಿ ತಾವೇ ಆಯ್ಕೆ ಮಾಡಿರುವ ಅಭ್ಯರ್ಥಿ ಸಿಪಿ ಯೋಗೇಶ್ವರ್ ಪರವಾಗಿ ಡಿಕೆ ಶಿವಕುಮಾರ್ ಅಂತಿಮ ಹಂತದ ಪ್ರಚಾರ ನಡೆಸಲಿದ್ದಾರೆ. ಇಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕುಮಾರಸ್ವಾಮಿಗೂ ಇಲ್ಲಿ ಮಗನನ್ನು ಗೆಲ್ಲಿಸಿಕೊಡುವ ಒತ್ತಡವಿದೆ.
ಸಂಡೂರಿನಲ್ಲಿ ಜನಾರ್ಧನ ರೆಡ್ಡಿಗೆ ಬಳ್ಳಾರಿ ಎಂಟ್ರಿಗೆ ಕೋರ್ಟ್ ಅನುಮತಿ ಸಿಕ್ಕ ಬಳಿಕ ಮೊದಲ ಚುನಾವಣೆ ಇದಾಗಿದೆ. ಹೀಗಾಗಿ ರೆಡ್ಡಿ ಬ್ರದರ್ಸ್ ಗೆ ಮತ್ತೆ ಬಳ್ಳಾರಿಯಲ್ಲಿ ಹಿಡಿತ ಸಾಧಿಸಲು ಈ ಚುನಾವಣೆಯಲ್ಲಿ ಗೆಲುವು ಅನಿವಾರ್ಯ. ಆದರೆ ಇಲ್ಲಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಸಾಕಷ್ಟು ಪ್ರಚಾರ ನಡೆಸಿದ್ದಾರೆ. ಇಂದು ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದ್ದು ಮೂರೂ ಕ್ಷೇತ್ರಗಳಲ್ಲಿ ಘಟಾನುಘಟಿ ನಾಯಕರು ಪ್ರಚಾರ ನಡೆಸಲಿದ್ದಾರೆ.