Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್ ಗೆ ಚನ್ನಪಟ್ಟಣ ನೆನಪಾಗೋದು

BY Vijayendra

Krishnaveni K

ಬೆಂಗಳೂರು , ಮಂಗಳವಾರ, 5 ನವೆಂಬರ್ 2024 (19:05 IST)
ಬೆಂಗಳೂರು: ಬಿಜೆಪಿ, ಎಂಎಲ್‍ಸಿ ಮಾಡಿದ್ದರೂ ಅಧಿಕಾರ ದಾಹದಿಂದ ಯೋಗೇಶ್ವರ್ ಅವರು ಕಾಂಗ್ರೆಸ್ಸಿಗೆ ಹೋಗಿದ್ದಾರೆ. ಇನ್ನೊಂದೆಡೆ ಅಭಿವೃದ್ಧಿಯನ್ನೇ ಮಾಡದ ಕಾಂಗ್ರೆಸ್ ಪಕ್ಷಕ್ಕೆ ಉಪ ಚುನಾವಣೆ ಬಂದಾಗ ಚನ್ನಪಟ್ಟಣ ಕ್ಷೇತ್ರ ನೆನಪಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದರು.

ಚನ್ನಪಟ್ಟಣ ಕ್ಷೇತ್ರದಲ್ಲಿ ಇಂದು ಕೇಂದ್ರದ ಸಚಿವ ಎಚ್.ಡಿ.ಕುಮಾರಸ್ವಾಮಿ, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತಿತರ ಮುಖಂಡರ ಜೊತೆ ವಿಜಯೇಂದ್ರ ಅವರು ರೋಡ್ ಷೋ ಮತ್ತು ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಅಭಿವೃದ್ಧಿಶೂನ್ಯ ಆಡಳಿತ ನೀಡಿದ ಕಾಂಗ್ರೆಸ್ ಪಕ್ಷ ಹಾಗೂ ಅಧಿಕಾರ ದಾಹದ ಅಭ್ಯರ್ಥಿಗೆ ಚನ್ನಪಟ್ಟಣ ಕ್ಷೇತ್ರದ ಮತದಾರರು ಪಾಠ ಕಲಿಸಬೇಕೆಂದು ಮನವಿ ಮಾಡಿದರು.

ಕುಮಾರಸ್ವಾಮಿಯವರು ಮಂಡ್ಯದ ಜನರ ಆಶೀರ್ವಾದದಿಂದ ಸಂಸದರಾಗಿ, ಕೇಂದ್ರ ಸಚಿವರಾದರೋ ಮರುದಿನದಿಂದ ಕಾಂಗ್ರೆಸ್ ಮುಖಂಡರು ಇಲ್ಲಿ ಬಂದು ಅಂಗಡಿ ತೆರೆದಿದ್ದಾರೆ. ಆಡಳಿತಕ್ಕೆ ಬಂದು ಒಂದೂವರೆ ವರ್ಷವಾದರೂ ಇತ್ತ ಬಾರದ ಕಾಂಗ್ರೆಸ್ಸಿಗರು, ಡಿ.ಕೆ.ಶಿವಕುಮಾರ್ ಅವರು ಉಪ ಚುನಾವಣೆ ಮುನ್ಸೂಚನೆ ಸಿಕ್ಕಿದಾಗ ಚನ್ನಪಟ್ಟಣ ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು ಎಂದು ಆರೋಪಿಸಿದರು.
ಚನ್ನಪಟ್ಟಣ ತಾಲ್ಲೂಕನ್ನು ತಾವು ಒಂದೂಮುಕ್ಕಾಲು ವರ್ಷದಲ್ಲಿ ನೋಡಲಿಲ್ಲ. ಉಪ ಚುನಾವಣೆ ಘೋಷಣೆ ಬಳಿಕ ಅವರಿಗೆ ಅಚಾನಕ್ಕಾಗಿ ಚನ್ನಪಟ್ಟಣದ ನೆನಪಾಗಿದೆ ಎಂದ ಅವರು, ಅನುದಾನ ಇಲ್ಲದ ಕಾರಣ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಸ್ಥಿತಿ ಬಂದಿದೆ ಎಂದು ಅದೇ ಪಕ್ಷದ ಶಾಸಕ ರಾಜು ಕಾಗೆ ಹೇಳಿದ್ದಾರೆ. ಆರ್.ವಿ.ದೇಶಪಾಂಡೆಯವರೂ ಇದೇ ವಿಷಯವನ್ನು ತಿಳಿಸಿದ್ದಾರೆ ಎಂದು ವಿವರಿಸಿದರು.
ಬಿಜೆಪಿಯ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಹೆಣ್ಮಕ್ಕಳಿಗಾಗಿ ಜಾರಿಗೊಳಿಸಿದ ಭಾಗ್ಯಲಕ್ಷ್ಮಿ ಬಾಂಡನ್ನು ಸಿದ್ದರಾಮಯ್ಯರ ಸರಕಾರ ನಿಲ್ಲಿಸಿದೆ. ಭೀಕರ ಬರ, ನೆರೆ ಇದ್ದರೂ ರೈತರ ಸಮಸ್ಯೆಗೆ ಈ ಸರಕಾರ ಸ್ಪಂದಿಸುತ್ತಿಲ್ಲ. ಹಿಂದೆ ಬಿಜೆಪಿ ಸರಕಾರ ಇದ್ದಾಗ ರೈತರು ಹೊಲಕ್ಕೆ ಪಂಪ್‍ಸೆಟ್ ಹಾಕಲು 25 ಸಾವಿರ ಕಟ್ಟಿದರೆ ಸಾಕಿತ್ತು. ಈಗ ಕಾಂಗ್ರೆಸ್ ಸರಕಾರ ಬಂದ ಬಳಿಕ ರೈತರು ಹೊಲಕ್ಕೆ ಪಂಪ್‍ಸೆಟ್ ಹಾಕಲು 2.5 ಲಕ್ಷದಿಂದ 3 ಲಕ್ಷ ರೂ. ಕಟ್ಟಬೇಕಾಗಿದೆ. ಅಂಥ ಕೆಟ್ಟ ಸ್ಥಿತಿಯನ್ನು ಸಿದ್ದರಾಮಯ್ಯರ ಸರಕಾರ ತಂದೊಡ್ಡಿದೆ ಎಂದು ಆಕ್ಷೇಪಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರದ ಮೂಲಕ ಹಣ ದೋಚಿದ ಸರಕಾರ ಇದು. ಮುಡಾ ಹಗರಣ ವಿರುದ್ಧ ಕುಮಾರಸ್ವಾಮಿಯವರು ಮತ್ತು ನಾವು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಿದ್ದೇವೆ. ಭ್ರಷ್ಟಾಚಾರರಹಿತ ಆಡಳಿತ ನೀಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರು ನಾಳೆ ರಾಜ್ಯದ ಮುಖ್ಯಮಂತ್ರಿಯಾಗಿ ಲೋಕಾಯುಕ್ತದ ತನಿಖೆ ಎದುರಿಸುತ್ತಾರಾ? ಆರೋಪಿಯಾಗಿ ಹೋಗುತ್ತಾರಾ? ಎಂಬುದಾಗಿ ರಾಜ್ಯದ ಜನರು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಗಮನ ಸೆಳೆದರು. ಎನ್‍ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯವರನ್ನು ಬೆಂಬಲಿಸಿ ಗೆಲ್ಲಿಸುವಂತೆ ಅವರು ಮನವಿ ಮಾಡಿದರು.

ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಕಾಂಗ್ರೆಸ್ಸಿಗೆ ಇಲ್ಲಿ ಅಭ್ಯರ್ಥಿಯೇ ಇರಲಿಲ್ಲ. ತಮ್ಮ ವಿರೋಧಿಗಳ ವಿರೋಧಿಯೇ ಸ್ನೇಹಿತ ಎಂದು ತಿಳಿದುಕೊಂಡು ಅಭ್ಯರ್ಥಿಯನ್ನಾಗಿ ಯೋಗೇಶ್ವರರನ್ನು ಸೆಳೆದಿದ್ದಾರೆ. ಅವರದೇನಿದ್ದರೂ ಎರಡನೇ ಲೈನಿನಲ್ಲಿರುವ ಅವಕಾಶ ಅಷ್ಟೇ ಎಂದು ತಿಳಿಸಿದರು.
ಸೋಲಿನ ಮುನ್ಸೂಚನೆ ಇರುವ ಕಾರಣ ಯೋಗೇಶ್ವರ್ ಅವರು ಮತ್ತೆ ಎಂಎಲ್‍ಸಿ ಮಾಡುವಂತೆ ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ವಿವರಿಸಿದರು. ಬಿಜೆಪಿ ಸರಕಾರ ಬಂದ ಬಳಿಕ ಯೋಗೇಶ್ವರ್ ಜನಹಿತದ ಕಾರ್ಯ ಮಾಡಿದ್ದಾರೆ. ಅದಕ್ಕೆ ಹಣ ಕೊಟ್ಟಿದ್ದು ಬಿಜೆಪಿ ಸರಕಾರ. ಬಿಜೆಪಿ ಸರಕಾರದ ಹಣದಿಂದ ಅಭಿವೃದ್ಧಿ ಆಗಿದೆ. ಯೋಗೇಶ್ವರರ ಮನೆಯ ಹಣದಿಂದ ಆದ ಅಭಿವೃದ್ಧಿ ಇದಲ್ಲ ಎಂದು ವ್ಯಂಗ್ಯವಾಗಿ ತಿಳಿಸಿದರು.

ಇಲ್ಲಿ ಕುಮಾರಸ್ವಾಮಿ ಮತ್ತು ವಿಜಯೇಂದ್ರರವರು ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ಇಲ್ಲಿ ಎನ್‍ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಪಂಚ ಗ್ಯಾರಂಟಿಯಿಂದ ಕಾಂಗ್ರೆಸ್ ಸರ್ಕಾರಕ್ಕೆಯೇ ಗ್ಯಾರಂಟಿ ಇಲ್ಲದಂತಾಗಿದೆ: ಬಸನಗೌಡ ಪಾಟೀಲ್ ವ್ಯಂಗ್ಯ