ಬೆಂಗಳೂರು: ರೈತರ ಜಮೀನಿನ ಪಹಣಿಗಳಲ್ಲಿ ವಕ್ಫ್ ಮಂಡಳಿ ಮೊಹರು ಹಾಕುತ್ತಿರುವುದರ ವಿರುದ್ಧ ಸಿಡಿದೆದ್ದು ರಾಜ್ಯ ಬಿಜೆಪಿ ಘಟಕ ನಮ್ಮ ಭೂಮಿ ನಮ್ಮ ಹಕ್ಕು ಹೋರಾಟ ಮಾಡಲು ನಿರ್ಧರಿಸಿದೆ.
ನಿನ್ನೆಯಷ್ಟೇ ಚಿಕ್ಕಬಳ್ಳಾಪುರದಲ್ಲಿ ರೈತರು ಉಳುಮೆ ಮಾಡಲು ಹೊರಟಾಗ ಅದು ವಕ್ಫ್ ಭೂಮಿಯೆಂದು ವಾಗ್ವಾದವೇ ನಡೆದಿತ್ತು. ಈ ಸಂಬಂಧ ರೈತರ ವಿರುದ್ಧವೇ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಲ್ಲದೆ ಕೇಸ್ ಕೂಡಾ ದಾಖಲಿಸಿದ್ದಾರೆ. ವಕ್ಫ್ ವಿವಾದ ಈಗ ರೈತರ ಆಕ್ರೋಶವಾಗಿ ಮಾರ್ಪಟ್ಟಿದೆ.
ಇದರ ಬೆನ್ನಲ್ಲೇ ರಾಜ್ಯ ಬಿಜೆಪಿ ಘಟಕ ಈ ವಿಚಾರವಾಗಿ ರಾಜ್ಯಾದ್ಯಂತ ಜಾಗೃತಿ ಅಭಿಯಾನ ಹೋರಾಟ ನಡೆಸಲು ತೀರ್ಮಾನಿಸಿದೆ. 3 ತಂಡ ರಚಿಸಿ ರಾಜ್ಯಾದ್ಯಂತ ಪ್ರವಾಸ ಮಾಡಿ ವಕ್ಫ್ ನೋಟಿಸ್ ಬಗ್ಗೆ ವಾಸ್ತವಿಕ ಅಂಶವನ್ನು ಹೊರಗೆಳೆಯಲು ಬಿಜೆಪಿ ಘಟಕ ತೀರ್ಮಾನಿಸಿದೆ. ಪ್ರವಾಸದ ವೇಳೆ ಕಂಡುಬಂದ ಅಂಶಗಳನ್ನು ಜಂಟಿ ಸಂಸದೀಯ ಕಮಿಟಿ ಮುಂದೆ ಮಂಡಿಸಲು ಬಿಜೆಪಿ ತೀರ್ಮಾನಿಸಿದೆ.
1954 ರಿಂದ ಆರಂಭವಾದ ವಕ್ಫ್ ಗೆಜೆಟ್ ಆದೇಶ ರದ್ದು ಮಾಡಬೇಕು, ವಕ್ಫ್ ಕ್ಲೇಮ್ ಮಾಡುತ್ತಿರುವ ರೈತರು, ಮಠಗಳು, ಸರ್ಕಾರಿ ಜಮೀನು ವಾಪಸ್ ಮಾಡಬೇಕು. ವಕ್ಫ್ ಮಂಡಳಿ ಕುರಿತಾದ ಅನ್ವರ್ ಮಾಣಿಪ್ಪಾಡಿ ವರದಿ ಜಾರಿಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನಿಟ್ಟುಕೊಂಡು ಬಿಜೆಪಿ ಪ್ರತಿಭಟನೆ ನಡೆಸಲಿದೆ.