Select Your Language

Notifications

webdunia
webdunia
webdunia
webdunia

ಸರ್ಕಾರ ಜನರ ಹುಣ್ಣಿನ ಮೇಲೆ ಬರೆ ಹಾಕುತ್ತಿದೆ: ಛಲವಾದಿ ನಾರಾಯಣಸ್ವಾಮಿ

Chalavadi Narayanaswamy

Krishnaveni K

ಬೆಂಗಳೂರು , ಗುರುವಾರ, 20 ಜೂನ್ 2024 (12:17 IST)
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿದ್ದು ಖಂಡನೀಯ ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ತೈಲ ಬೆಲೆ ಏರಿಕೆಯಿಂದ ದವಸಧಾನ್ಯಗಳ ಬೆಲೆ ಏರಿಕೆಯಾಗಿದೆ. ನೀರಿನ ದರ ಏರಿಕೆ ಕುರಿತು ಈಗ ಹೇಳಿಕೆ ಹೊರಬಿದ್ದಿದೆ ಎಂದು ಆಕ್ಷೇಪಿಸಿದರು.

ಸ್ಟಾಂಪ್ ಪೇಪರ್ ಬೆಲೆ ಏರಿಕೆಯಿಂದ ಆಸ್ತಿ ನೋಂದಣಿಗೆ ಹೆಚ್ಚು ಹಣ ಕೊಡಬೇಕಾಗಿದೆ. ಇವರು ನುಡಿದಂತೆ ನಡೆದಿಲ್ಲ. ಸಿದ್ದರಾಮಯ್ಯನವರು ಹೇಳೋದೊಂದು ಮಾಡೋದೊಂದು ಎಂದು ಅವರು ಟೀಕಿಸಿದರು. ಇದನ್ನು ವಿರೋಧಿಸಿ ಇವತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಿ.ಟಿ.ರವಿ, ಡಾ.ಅಶ್ವತ್ಥನಾರಾಯಣ್ ಅವರ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾದೆವು. ಇದಕ್ಕಾಗಿ ಸೈಕಲ್ ಯಾತ್ರೆಗೆ ಮುಂದಾಗಿದ್ದೆವು ಎಂದರು.

ಮುಖ್ಯಮಂತ್ರಿಗಳು ನಿನ್ನೆಯಿಂದ ಇಂಥ ವಿರೋಧವನ್ನು ಹತ್ತಿಕ್ಕುವ ಕೆಲಸ ಪ್ರಾರಂಭಿಸಿದ್ದಾರೆ. ಮಾನ್ಯ ಗೃಹ ಸಚಿವರು ಆ ರೀತಿ ಮಾಡಿದ್ದೇ ಆದರೆ, ನಮ್ಮ ಲಾಠಿ ರುಚಿ ತೋರಿಸುವುದಾಗಿ ಹೇಳಿದ್ದಾರೆ. ಇದು ಉದ್ಧಟತನದ ಪರಮಾವಧಿ ಅಲ್ಲವೇ ಎಂದು ಪ್ರಶ್ನಿಸಿದರು.

ಒಂದು ವಿರೋಧ ಪಕ್ಷವಾಗಿ ನೀವು ಮಾಡಿದ ತಪ್ಪುಗಳನ್ನು ಎತ್ತಿ ಹಿಡಿಯುವ ಕೆಲಸ ಯಾವುದು? ವಿಪಕ್ಷಗಳು ಹೋರಾಟದ ಮೂಲಕ ಜನರ ಅನಿಸಿಕೆಗಳನ್ನು ನಿಮ್ಮ ಗಮನಕ್ಕೆ ತರುವುದು ನಮ್ಮ ಕರ್ತವ್ಯ ಎಂದು ಅಭಿಪ್ರಾಯಪಟ್ಟರು. ಅಂಥ ಪ್ರಜಾಪ್ರಭುತ್ವ ವ್ಯವಸ್ಥೆಗೂ ಅವಕಾಶ ಕೊಡದಿದ್ದರೆ ನೀವೆಂಥ ಸರಕಾರ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದರು. ಇದೇನು ಹಿಟ್ಲರ್ ಸರಕಾರವೇ? ಸಿಎಂ ಅಥವಾ ಗೃಹ ಸಚಿವರು ಹಿಟ್ಲರ್ ಆಗಿದ್ದಾರಾ ಎಂದೂ ಆಕ್ಷೇಪಿಸಿದರು. ಹೀಗೆ ಹತ್ತಿಕ್ಕುವ ಕಾರ್ಯವನ್ನು ನಮ್ಮ ಸರಕಾರ ಯಾವತ್ತೂ ಮಾಡಿಲ್ಲ ಎಂದು ನುಡಿದರು.

ಇವರು ಬಂಧಿಸಲು ನಮ್ಮ ಕಚೇರಿಯ ಬಾಗಿಲಿಗೇ ಬರುತ್ತಾರೆ; ನಮ್ಮ ಅಧ್ಯಕ್ಷರು, ನಮ್ಮೆಲ್ಲರನ್ನು ಅರೆಸ್ಟ್ ಮಾಡಿದ್ದಾರೆ. ಈ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ತಿಳಿಸಿದರು. ಬಡವರಿಗೆ ಆಸೆ, ಆಮಿಷಗಳನ್ನು ತೋರಿಸಿ ರಾಜ್ಯದಲ್ಲಿ ಚುನಾವಣೆ ವೇಳೆ ಜನರನ್ನು ಸೆಳೆದು, ಅವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿ ಇವತ್ತು ನುಡಿದಂತೆ ನಡೆದಿದ್ದೇವೆ ಎನ್ನುತ್ತೀರಲ್ಲವೇ? ಇದು ಡೋಂಗಿ ಎಂದು ಟೀಕಿಸಿದರು.

ಜನರ ಹುಣ್ಣಿನ ಮೇಲೆ ಬರೆ ಹಾಕುವ ಕೆಲಸ ಸರಕಾರದಿಂದ ಆಗುತ್ತಿದೆ. ಇಂಥದ್ದನ್ನು ಸಹಿಸಿಕೊಂಡು ಕುಳಿತಿರಲು ಅಸಾಧ್ಯ. ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಸೇರಿ ಇಡೀ ರಾಜ್ಯಾದ್ಯಂತ ನಿಮ್ಮ ವಿರುದ್ಧ ಪ್ರತಿಭಟನೆ ಮಾಡಿ ಈ ಸರಕಾರವನ್ನು ಆದಷ್ಟು ಬೇಗ ಮನೆಗೆ ಕಳಿಸಲು ಸಜ್ಜಾಗಿದ್ದಾರೆ. ರೈತ ಸಂಘಟನೆಗಳು, ದಲಿತ ಸಂಘಟನೆಗಳು, ಸಾರಿಗೆ ಸಂಘಟನೆಗಳು ಮೊದಲಾದವುಗಳನ್ನು ಒಗ್ಗೂಡಿಸಿ ನಿಮ್ಮ ವಿರುದ್ಧ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟವನ್ನು ರೂಪಿಸಲು ಸಜ್ಜಾಗುತ್ತೇವೆ ಎಂದು ಎಚ್ಚರಿಸಿದರು.
 
 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ: ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರ ಬಂಧನ