ಬೆಂಗಳೂರು: ರಾಜ್ಯದ 14 ಜಿಲ್ಲೆಗಳಲ್ಲಿ ಸಿಟಿ ಸ್ಕ್ಯಾನ್, ಎಂಆರ್ ಸ್ಕ್ಯಾನ್ ಸೇವೆ ಸ್ಥಗಿತಗೊಳಿಸಲಾಗಿದ್ದು, ಇದರ ಬಗ್ಗೆ ವಿಪಕ್ಷ ಬಿಜೆಪಿ ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 6 ತಿಂಗಳಿನಿಂದ ಬಿಲ್ ಪಾವತಿಸದ ಹಿನ್ನಲೆಯಲ್ಲಿ 14 ಜಿಲ್ಲೆಗಳ ಜಿಲ್ಲಾಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್, ಎಂಆರ್ ಐ ಸ್ಕ್ಯಾನ್ ಮುಂತಾದ ದುಬಾರಿ ವೆಚ್ಚದ ಸ್ಕ್ಯಾನಿಂಗ್ ಸೌಲಭ್ಯಗಳನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಬಡ ರೋಗಿಗಳು ಪರದಾಡುವ ಪರಿಸ್ಥಿತಿಯಾಗಿದೆ.
ಈ ಎಲ್ಲಾ ಜಿಲ್ಲೆಗಳ ಸರ್ಜನ್ ಗಳಿಗೆ ಸೆ.22 ರಂದೇ ಕಂಪನಿಗಳು ಪತ್ರ ಬರೆದರೂ ಕ್ರಮ ಕೈಗೊಂಡಿಲ್ಲ. ಬಾಕಿ ಹಣ ನೀಡದ್ದರಿಂದ ಸೆ.24 ರಿಂದಲೇ ಸೇವೆ ಸ್ಥಗಿತಗೊಳಿಸಲಾಗಿದೆ. ಕೋಲಾರ, ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಚಾಮರಾಜನಗರ, ಕೊಡಗು, ವಿಜಯಪುರ, ಧಾರವಾಡ, ಹಾವೇರಿ, ದಾವಣಗೆರೆ, ಯಾದಗಿರಿ, ಉಡುಪಿ ಮತ್ತು ಬಾಗಲಕೋಟೆ ಜಿಲ್ಲೆಗಳ ಜಿಲ್ಲಾಸ್ಪತ್ರೆಗಳಲ್ಲಿ ಸೇವೆ ಬಂದ್ ಆಗಿದೆ.
ಇದನ್ನು ಟೀಕಿಸಿರುವ ಬಿಜೆಪಿ ಸರ್ಕಾರದ ಬಳಿ ಆಸ್ಪತ್ರೆಗಳ ಚಿಕಿತ್ಸಾ ಸೌಲಭ್ಯಕ್ಕೆ ನೀಡಲೂ ದುಡ್ಡಿಲ್ಲವೇ? ಆರೋಗ್ಯ ಸಚಿವರು ನಾಪತ್ತೆಯಾಗಿದ್ದು, ಸರ್ಕಾರ ಐಸಿಯುವಿನಲ್ಲಿದೆ ಎಂದಿದೆ. ಜಿಲ್ಲಾಸ್ಪತ್ರೆಗಳಿಗೆ ಬಿಲ್ ಪಾವತಿ ಮಾಡಲೂ ಸರ್ಕಾರದ ಬಳಿ ದುಡ್ಡಿಲ್ಲ ಎಂದರೆ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದರ್ಥ ಎಂದು ಟೀಕೆ ಮಾಡಿದೆ. ಸಾರ್ವಜನಿಕ ವಲಯದಿಂದಲೂ ಇದರ ಬಗ್ಗೆ ಟೀಕೆ ಕೇಳಿಬಂದಿದ್ದು, ಇದೆಲ್ಲಾ ಗ್ಯಾರಂಟಿ ಮಹಿಮೆ ಎಂದಿದ್ದಾರೆ.