ಎಮ್ಮೆಯನ್ನು ನೀರಿನವರೆಗೆ ಕರೆದುಕೊಂಡು ಹೋಗಬಹುದು. ಆದರೆ, ನೀರು ಕುಡಿಸಲು ಸಾಧ್ಯವಿಲ್ಲ ಎನ್ನುವ ಮೂಲಕ ಸ್ಪೀಕರ್ ಕೆ.ಬಿ.ಕೋಳಿವಾಡ್ ಅವರು ಪರೋಕ್ಷವಾಗಿ ಶಾಸಕರನ್ನು ಎಮ್ಮೆಗೆ ಹೋಲಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಶಾಸಕರು ಒಂದು ಬಾರಿ ಹಾಜರಾತಿ ಹಾಕುವ ಪ್ರಕ್ರಿಯೆ ಇದೆ. ಆದರೆ, ಮೂರು ಬಾರಿ ಹಾಜರಾತಿ ಹಾಕುವ ಪ್ರಕ್ರಿಯೆ ಜಾರಿಗೆ ತರಲು ಚಿಂತಿಸಲಾಗುತ್ತಿದೆ. ಹೀಗೆ ಮಾಡಿದರೆ ಸದನದಲ್ಲಿ ಬಹುತೇಕ ಶಾಸಕರು ಹಾಜರಾಗುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯಪಟ್ಟರು.
ಶ್ರೀನಿವಾಸ್ ಪ್ರಸಾದ್ ರಾಜೀನಾಮೆ ವಿಚಾರ.....
ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕುರಿತು ಪರಿಶೀಲನೆ ಪ್ರಕ್ರಿಯೆ ಮುಕ್ತಾಯವಾಗಿದ್ದು, ಇಂದು ಮಧ್ಯಾಹ್ನ 3 ಗಂಟೆಗೆ ನಿರ್ಧಾರ ಪ್ರಕಟಿಸುತ್ತೇನೆ. ಈಗಾಗಲೇ ಶ್ರೀನಿವಾಸ್ ಪ್ರಸಾದ್ ಅವರ ಜೊತೆ ಮಾತನಾಡಿದ್ದೇನೆ. ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಅಂಗೀಕರಿಸದಂತೆ ನನ್ನ ಮೇಲೆ ಯಾವ ಒತ್ತಡವು ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜಕಾಲುವೆ ಒತ್ತುವರಿ ವಿಷಯ.....
ರಾಜಕಾಲುವೆ ಹಾಗೂ ಕೆರೆ ಒತ್ತುವರಿ ಕುರಿತು ಮಾಹಿತಿ ಪಡೆದುಕೊಂಡಿದ್ದೇನೆ. ರಾಜಕಾಲುವೆ ಬಫರ್ ಜೋನ್ ಕುರಿತು ನಾಳೆ ಸಭೆ ನಡೆಸುತ್ತೇನೆ. ಸಂಪೂರ್ಣ ಮಾಹಿತಿ ಪಡೆದುಕೊಂಡು ವರದಿ ಸಲ್ಲಿಸುತ್ತೇನೆ. ನಗರದಲ್ಲಿ ಒಟ್ಟು 1500 ಎಕರೆ ಪ್ರದೇಶ ಒತ್ತುವರಿ ಆಗಿರುವುದು ಖಚಿತ ಎಂದು ಸ್ಪೀಕರ್ ಕೆ.ಬಿ.ಕೋಳಿವಾಡ್ ಮಾಹಿತಿ ನೀಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ