ಬೆಳಗಾವಿ: ದ್ವಿ ಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಮೇಲೆ ಸಾಲ ಪಡೆದು ಚೆಸ್ಸಿ ನಂಬರ್ ಬದಲಾಯಿಸಿ ಬೇರೊಬ್ಬರಿಗೆ ಮಾರಾಟ ಮಾಡುತ್ತಿದ್ದ ವಂಚಕ ಜಾಲವನ್ನು ಬೆಳಗಾವಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ವಾಸುದೇವ ನಾಯಕ, ಚಂದ್ರಕಾಂತ ಗಾಡಿವಡ್ಡರ, ಮಹೇಶ ಗಾಡಿವಡ್ಡರ, ಉಸ್ಮಾನ್ ಮನಿಯಾರ್, ಮಹಾವೀರ ಗಾಡಿವಡ್ಡರ, ಪ್ರಭಾಕರ ಪೋಳ, ವಿನಾಯಕ ಪೋಳ, ರಾಮಪ್ಪ ಗಾಣಿಗೇರ ಎಂಬುವರೇ ಬಂಧೀತ ಆರೋಪಿಗಳಾಗಿದ್ದಾರೆ. ಒಟ್ಟು ಎಂಟು ಜನರನ್ನು ವಶಕ್ಕೆ ಪಡೆಯಲಾಗಿದ್ದು, ಮೂರು ಜನರು ಪರಾರಿಯಾಗಿದ್ದಾರೆ. ಬಂಧಿತರಿಂದ ಆರು ಟ್ರ್ಯಾಕ್ಟರ್, 4 ಬುಲೆರೋ ಹಾಗೂ ಮ್ಯಾಕ್ಸಿ ಕ್ಯಾಬ್, ಒಂದು ಬೋಲ್ಟ್, ಒಂದು ಮಹಿಂದ್ರಾ ಕಾರ್, ಮೂರು ಬುಲೆರೋ, ನಾಲ್ಕು ಗೂಡ್ಸ್ ಸೇರಿದಂತೆ 1.6 ಕೋಟಿ ಮೌಲ್ಯದ 19 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇವುಗಳ ಜತೆಗೆ ಫೇಖ್ ದಾಖಲಾತಿ ತಯಾರಿಸಲು ಉಪಯೋಗಿಸುತ್ತಿದ್ದ ಕಂಪ್ಯೂಟರ್, ಪ್ರಿಂಟರ್ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಗಳು ಬಾಗಲಕೋಟೆ, ವಿಜಯಪುರ, ಗದಗ, ಹುಬ್ಬಳ್ಳಿ, ರಾಯಚೂರು ಸೇರಿದಂತೆ ವಿವಿಧ ಭಾಗಗಳಲ್ಲಿ ತಮ್ಮ ವಂಚನೆ ಜಾಲವನ್ನು ಬೀಸಿದ್ದರು. ಕಳುವು ಮಾಡಿದ ವಾಹನಗಳ ಚೆಸ್ಸಿ ನಂಬರ್ ಬದಲಾಯಿಸಿ, ಅದಕ್ಕೆ ಪೂರಕವಾದ ಸುಳ್ಳು ದಾಖಲಾತಿಗಳನ್ನು ತಾವೇ ತಯಾರಿಸುತ್ತಿದ್ದರು. ನಂತರ ವಿವಿಧ ಹಣಕಾಸು ಸಂಸ್ಥೆಗಳಿಂದ ವಾಹನಗಳ ಮೇಲೆ ಸಾಲ ಪಡೆದು, ಕೆಲ ದಿನಗಳ ಕಾಲ ಓಡಿಸಿ ಎಲ್ಲೆಂದರಲ್ಲಿ ಬಿಟ್ಟು ಪರಾರಿಯಾಗುತ್ತಿದ್ದರು. ಅಥವಾ ಬೇರೆಯವರಿಗೆ ಮಾರಾಟ ಮಾಡುತ್ತಿದ್ದರು.
ವಂಚಕರ ಜಾಡು ಹಿಡಿದು ಹೊರಟ ಬೆಳಗಾವಿ ಎಸ್.ಪಿ. ರವಿಕಾಂತೇಗೌಡ ಮತ್ತವರ ತಂಡ ಎಂಟು ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧೀತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಗೋವಾ, ತಮಿಳುನಾಡು, ಆಂಧ್ರಪ್ರದೇಶಗಳಿಗೂ ಜಾಲ ವ್ಯಾಪಿಸಿರುವುದು ಬೆಳಕಿಗೆ ಬಂದಿದೆ. ಸಂಬಂಧಿಸಿ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.