ಮಧ್ಯಪ್ರದೇಶದಂತೆ ರಾಜ್ಯದಲ್ಲೂ ಅತ್ಯಾಚಾರ ಮಾಡಿದವರಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೊಳಿಸಲು ಮುಖ್ಯಮಂತ್ರಿ ಜೊತೆಗೆ ಮಾತನಾಡುತ್ತೇನೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ವಿಜಯಪುರದಲ್ಲಿ ನಡೆದ ದಾನಮ್ಮ ಪ್ರಕರಣದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವ, ಪ್ರಕರಣವನ್ನು ಮುಖ್ಯಮಂತ್ರಿಯವರು ಸಿಐಡಿಗೆ ರೆಫರ್ ಮಾಡಿದ್ದಾರೆ. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಮಧ್ಯಪ್ರದೇಶದಲ್ಲಿ ಜಾರಿಗೊಳಿಸಿರುವ ಕಾನೂನಿನ ವರದಿ ತರಿಸಿಕೊಂಡು ನಮ್ಮ ರಾಜ್ಯದಲ್ಲೂ ಆ ಕಾನೂನು ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಪತ್ರಕರ್ತೆ ಗೌರಿ ಲಂಕೇಶ ಪ್ರಕರಣದ ಆರೋಪಿ ಸಿಕ್ಕೇ ಸಿಗುತ್ತಾನೆ. ದಾಬೋಲ್ಕರ್ ಹತ್ಯೆಯಾಗಿ ನಾಲ್ಕು ವರ್ಷ ಕಳೆದಿವೆ. ಅದರಂತೆ ಆಗಲು ಬಿಡುವುದಿಲ್ಲ ಎಂದರು. ಮಹದಾಯಿ ನದಿ ನೀರು ಹಂಚಿಕೆ ವಿವಾದದಲ್ಲಿ ಬಿಜೆಪಿಯವರು ನಾಟಕ ಮಾಡುತ್ತಿದ್ದಾರೆ. ಅವರು ಡ್ರಾಮಾ ಮಾಡುವುದರಲ್ಲಿ ಎಕ್ಸ್‌ಪರ್ಟ್ ಎಂದು ವ್ಯಂಗ್ಯವಾಡಿದ್ದಾರೆ.
ದೆಹಲಿಯಲ್ಲಿ ಅಮಿತ್ ಶಾ ಮಾತಾಡ್ತಾರೆ, ಕರ್ನಾಟಕದಲ್ಲಿ ಯಡಿಯೂರಪ್ಪ ಪತ್ರ ಬರೀತಾರೆ. ಅದಕ್ಕೆ ಗೋವಾ ಸಿಎಂ ಉತ್ತರ ಬರೆಯುತ್ತಾರೆ. ಆದರೆ, ರಾಜ್ಯದ ಮುಖ್ಯಮಂತ್ರಿ ಪತ್ರ ಬರೆದರೆ ಉತ್ತರಿಸುವುದೇ ಇಲ್ಲ. ಪರಿಕ್ಕರ್ ಬರೆದ ಪತ್ರ ಓದೋಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಬರ್ತಾರೆ. ಯಾಕೆ ಇಲ್ಲಿ ಯಾರಿಗೂ ಓದೋಕೆ ಬರಲ್ವಾ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಉತ್ತರ ಪ್ರದೇಶದಲ್ಲಿ 11.6 ರಷ್ಟು ಕ್ರೈಂ ರೇಟ್ ಇದೆ. ಯೋಗಿ ಆದಿತ್ಯನಾಥ್ ಮೊದಲು ಇದರ ಬಗ್ಗೆ ಗಮನ ಹರಿಸಲಿ. 80 ಹಸುಗೂಸು ಮಕ್ಕಳು ಸಾವನ್ನಪ್ಪಿದ್ದೂ ಅವರ ರಾಜ್ಯದ ಅವರದ್ದೇ ಕ್ಷೇತ್ರದಲ್ಲಿ. ಅದರ ಬಗ್ಗೆ ಅವರಿಗೆ ಯೋಚನೆ ಇಲ್ಲ, ಇಲ್ಲಿ ಟಿಪ್ಪು ಜಯಂತಿ ಬಗ್ಗೆ ಮಾತನಾಡಲು ಬರ್ತಾರೆ ಎಂದು ಕಿಡಿ ಕಾರಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.