ರಾಜ್ಯದಲ್ಲಿ ನಡೆದಿರುವ ಪಿಎಸ್ ಐ ಪರೀಕ್ಷಾ ಅಕ್ರಮ ಕುರಿತ ತನಿಖೆಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಸ್ ಐ ಅಕ್ರಮದಲ್ಲಿ ಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ. ಆದ್ದರಿಂದ ಸಿಐಡಿ ತನಿಖೆಯಿಂದ ನ್ಯಾಯ ದೊರಕುತ್ತದೆ ಎಂಬ ನಂಬಿಕೆ ಯಾರಿಗೂ ಇಲ್ಲ ಎಂದರು.
ಪಿಎಸ್ ಐ ಅಕ್ರಮ ನಡೆದಿದೆ ಎಂದು ಸ್ವತಃ ಬಿಜೆಪಿ ನಾಯಕರು, ಸಚಿವರೇ ಮೊದಲೇ ಪತ್ರ ಬರೆದು ಅಕ್ರಮದ ಸೂಚನೆ ನೀಡಿದ್ದಾರೆ. ಆದರೆ ಗೃಹ ಸಚಿವ ಅರಗ ಜ್ಞಾನೇಂದ್ರ ಬೇಜವಾಬ್ದಾಯಿಂದ ನಡೆದುಕೊಂಡು ಮುಚ್ಚಿ ಹಾಕಲು ಯತ್ನಿಸಿದ್ದಾರೆ. ಇಡೀ ಪ್ರಕರಣಕ್ಕೆ ಅರಗ ಜ್ಞಾನೇಂದ್ರ ಕಾರಣ. ಆದ್ದರಿಂದ ಅವರು ಸಚಿವರಾಗಿ ಮುಂದುವರಿಯಲು ಲಾಯಕ್ಕು ಅಲ್ಲ ಎಂದು ಅವರು ಹೇಳಿದರು.
ಮಾಗಡಿ ಮತ್ತು ಕುಣಿಗಲ್ ತಾಲೂಕಿನ ದರ್ಶನ್ ಗೌಡ ಮತ್ತು ನಾಗೇಶ್ ಗೌಡ ಬ್ಲೂಟೂತ್ ಬಳಸಿ ಪರೀಕ್ಷಾ ಅಕ್ರಮ ನಡೆಸಿದ್ದಾರೆ. ಇವರಿಬ್ಬರು ಪ್ರಭಾವಿ ಸಚಿವ ಅಶ್ವಥ್ ನಾರಾಯಣ್ ಅವರ ಸಂಬಂಧಿಕರಾಗಿದ್ದು, ತನಿಖೆಗೆ ಕರೆಸಿ ವಿಚಾರಣೆ ಹೇಗೆ ಬಿಡುಗಡೆ ಮಾಡಲಾಯಿತು. ಆದ್ದರಿಂದ ಅಶ್ವಥ್ ನಾರಾಯಣ್ ಈ ಪ್ರಕರಣದಲ್ಲಿ ನೇರ ಭಾಗಿಯಾಗಿದ್ದು ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.