Photo Courtesy: ANI X Page
ಕೊಪ್ಪಳ: ನರೇಂದ್ರ ಮೋದಿ ಈ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಪ್ರಧಾನಿಯಾದರೆ ನಮ್ಮ ದೇಶ ಅಮೆರಿಕಾವನ್ನೂ ಹಿಂದಿಕ್ಕಲಿದೆ ಎಂದು ಗಾಲಿ ಜನಾರ್ಧನ ರೆಡ್ಡಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶಾಸಕ ಜನಾರ್ಧನ ರೆಡ್ಡಿ, ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ ದೇಶ ಅತ್ಯಂತ ಹೆಚ್ಚು ಅಭಿವೃದ್ಧಿ ಹೊಂದಿದ ದೇಶವಾಗಲಿದೆ. ಅಮೆರಿಕಾವನ್ನು ಹಿಂದಿಕ್ಕಲಿದೆ ಎಂದು ಜನಾರ್ಧನ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗಷ್ಟೇ ತಾವೇ ಸ್ಥಾಪಿಸಿದ್ದ ಕೆಆರ್ ಪಿ ಪಕ್ಷವನ್ನು ಬಿಜೆಪಿ ಜೊತೆ ವಿಲೀನ ಮಾಡಿಕೊಂಡು ಮಾತೃ ಪಕ್ಷ ಸೇರಿದ್ದ ಜನಾರ್ಧನ ರೆಡ್ಡಿ ಕಾರ್ಯಕರ್ತರ ಸಭೆಯಲ್ಲಿ ಭರ್ಜರಿ ಭಾಷಣ ಮಾಡಿದ್ದಾರೆ. ದೇಶ ಕಳೆದ 10 ವರ್ಷಗಳಲ್ಲಿ ಯಾವುದೇ ಗಲಭೆಗಳಿಲ್ಲದೇ ಶಾಂತಿಯುತವಾಗಿ ನಡೆಯುತ್ತಿದೆ ಎಂದರೆ ಅದಕ್ಕೆ ನರೇಂದ್ರ ಮೋದಿ ಕಾರಣ ಎಂದಿದ್ದಾರೆ.
ಹಿಂದೂ ಮತ್ತು ಮುಸ್ಲಿಂ ನಡುವೆ ತಾನು ಯಾವತ್ತೂ ಬೇಧ ಭಾವ ಮಾಡಲ್ಲ. ನಮ್ಮ ತಾಯಿ ಸ್ವರೂಪರಾಗಿದ್ದ ದಿವಂಗತ ಸುಷ್ಮಾ ಸ್ವರಾಜ್ ಅವರೂ ಇದನ್ನೇ ಹೇಳುತ್ತಿದ್ದರು ಎಂದಿದ್ದಾರೆ. ಅಲ್ಲದೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗಂಗಾವತಿಯಲ್ಲಿ ತಾವು ಗೆಲ್ಲಲು ಶೇ.50 ಬಿಜೆಪಿ ಮತ್ತು ಶೇ.50 ಕಾಂಗ್ರೆಸ್ ಕಾರ್ಯಕರ್ತರು ಕಾರಣ ಎಂದೂ ಹೇಳಿದ್ದಾರೆ.