ಬೆಂಗಳೂರು: ಲೋಕಸಭೆ ಚುನಾವಣೆ ವೇಳೆಗೆ ಟಿಕೆಟ್ ಸಿಗಬಹುದೆಂಬ ನಿರೀಕ್ಷೆಯಲ್ಲಿ ಘರ್ ವಾಪಸಿ ಮಾಡಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆ ಹೈಕಮಾಂಡ್ ಶಾಕ್ ಕೊಟ್ಟಿದೆ.
ಜಗದೀಶ್ ಶೆಟ್ಟರ್ ಕಳೆದ ಬಾರಿ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಯಲ್ಲಿ ಟಿಕೆಟ್ ಸಿಗಲಿಲ್ಲವೆಂದು ಅಸಮಾಧಾನಗೊಂಡು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು. ಅಲ್ಲಿ ವಿಧಾನಸಭೆಯಲ್ಲಿ ಸೋತರೂ ಕಾಂಗ್ರೆಸ್ ಪಕ್ಷ ಅವರಿಗೆ ಎಂಎಲ್ ಸಿ ಟಿಕೆಟ್ ನೀಡಿತ್ತು. ಹೀಗಾಗಿ ಜಗದೀಶ್ ಶೆಟ್ಟರ್ ಶಾಸಕರಾಗಿದ್ದರು.
ಆದರೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗಬಹುದೆಂಬ ನಿರೀಕ್ಷೆಯಲ್ಲಿ ಮತ್ತೆ ಜಗದೀಶ್ ಶೆಟ್ಟರ್ ಬಿಜೆಪಿಗೆ ಬಂದಿದ್ದರು. ಬಹುಶಃ ಅವರಿಗೆ ರಾಜ್ಯ ನಾಯಕರಿಂದ ಟಿಕೆಟ್ ಭರವಸೆ ಸಿಕ್ಕಿರಬಹುದು. ಆದರೆ ಹೈಕಮಾಂಡ್ ಶೆಟ್ಟರ್ ಗೆ ಟಿಕೆಟ್ ನಿರಾಕರಿಸಿದೆ. ಇದರಿಂದಾಗಿ ಶೆಟ್ಟರ್ ಗೆ ಈಗ ಅತ್ತಲೂ ಇಲ್ಲ ಇತ್ತಲೂ ಇಲ್ಲ ಎಂಬ ಪರಿಸ್ಥಿತಿಯಾಗಿದೆ.
ಬಿಎಸ್ ಯಡಿಯೂರಪ್ಪ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದರು. ಅದು ಸುಳ್ಳಾಗಿದೆ. ಹೀಗಾಗಿ ಈಗ ಶೆಟ್ಟರ್ ಬೆಂಗಳೂರಿಗೆ ಬಂದು ಯಡಿಯೂರಪ್ಪನವರನ್ನು ಭೇಟಿಯಾಗಲಿದ್ದಾರೆ. ಮೊನ್ನೆಯಷ್ಟೇ ಡಿಕೆ ಶಿವಕುಮಾರ್ ಪಕ್ಷ ಬಿಟ್ಟು ಹೋದ ಜಗದೀಶ್ ಶೆಟ್ಟರ್ ಟಿಕೆಟ್ ಘೋಷಣೆ ಬಳಿಕ ನಿರಾಸೆಯಾಗಿ ನಮ್ಮ ಬಳಿಗೇ ಬರುತ್ತಾರೆ ಎಂದು ಲೇವಡಿ ಮಾಡಿದ್ದರು. ಇದು ಯಾಕೋ ಅದುವೇ ನಿಜವಾಗುವ ಲಕ್ಷಣ ಕಾಣುತ್ತಿದೆ.