ಚೀನಾದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದೆ. ಆದ್ದರಿಂದ ಆ ದೇಶಕ್ಕೆ ಜ್ವರದ ಔಷಧಗಳನ್ನು ರಫ್ತು ಮಾಡಲು ಸಿದ್ಧ ಎಂದು ಭಾರತದ ಔಷಧ ರಫ್ತು ಮಂಡಳಿ ತಿಳಿಸಿದೆ. ಚೀನಾದಲ್ಲಿ ಈ ತಿಂಗಳ ಆರಂಭದಲ್ಲಿ ಕೊವಿಡ್ ಪ್ರಕರಣಗಳಲ್ಲಿ ದಿಢೀರ್ ಏರಿಕೆ ಕಂಡಿದ್ದು, ಜ್ವರದ ಔಷಧಗಳಿಗೆ ಹಾಗೂ ಕೊವಿಡ್ ಪರೀಕ್ಷಾ ಕಿಟ್ಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಮೆಡಿಕಲ್ಗಳಲ್ಲಿ ಖರೀದಿಗಳ ಮೇಲೆ ಮಿತಿ ಹೇರಲಾಗಿದ್ದು, ಉತ್ಪಾದನೆ ಹೆಚ್ಚಿಸುವಂತೆ ಔಷಧ ತಯಾರಿಕಾ ಕಂಪನಿಗಳಿಗೆ ಸೂಚಿಸಲಾಗಿತ್ತು. ಐಬ್ರೂಫೇನ್ ಮತ್ತು ಪ್ಯಾರಾಸಿಟಮೋಲ್ ಔಷಧ ತಯಾರಿಕಾ ಕಂಪನಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಎರಡು ಔಷಧಗಳ ಕೊರತೆ ಚೀನಾದಲ್ಲಿದ್ದು, ಬೇಡಿಕೆ ಹೆಚ್ಚಾಗಿದೆ ಎಂದು ಭಾರತೀಯ ಔಷಧ ರಪ್ತು ಉತ್ತೇಜನಾ ಮಂಡಳಿಯ ಅಧ್ಯಕ್ಷ ಶಾಹಿಲ್ ಮುಂಜಲ್ ತಿಳಿಸಿದ್ದಾರೆ. ಈ ಕುರಿತು ನವದೆಹಲಿಯಲ್ಲಿರುವ ಚೀನಾದ ರಾಯಭಾರ ಕಚೇರಿ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ. ವಿಶ್ವದಲ್ಲೇ ಅತಿಹೆಚ್ಚು ಔಷಧ ತಯಾರಿಸುವ ದೇಶವಾಗಿ ಭಾರತ ಗುರುತಿಸಿಕೊಂಡಿದ್ದು, ಚೀನಾಕ್ಕೆ ಔಷಧ ರಫ್ತು ಮಾಡಲು ಸಿದ್ಧವಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.