ವಿವಿಧ ಪಕ್ಷಗಳು ಹಾಗೂ ಸಂಘಟನೆಗಳು ಸೆಪ್ಟೆಂಬರ್ 10 ರಂದು ಕರೆ ನೀಡಿರುವ ಭಾರತ್ ಬಂದ್ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಶಾಂತಿ ಸುವ್ಯವಸ್ಥೆ ಕಾಪಾಡಲು ಹಾಗೂ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೆ ಒಂದು ದಿನದ ರಜೆ ಘೋಷಿಸಲಾಗಿದೆ. ಪರಿಸ್ಥಿತಿ ನೋಡಿಕೊಂಡು ಇನ್ನೂ ಕೆಲವು ಜಿಲ್ಲೆಗಳಲ್ಲಿ ರಜೆ ಘೋಷಣೆ ಮಾಡುವ ಸಾಧ್ಯತೆ ಇದೆ.
ಕಲಬುರಗಿ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೆ ಒಂದು ದಿನದ ರಜೆ ಘೋಷಿಸಿ ಡಿಸಿ ಆರ್. ವೆಂಕಟೇಶ ಕುಮಾರ ಆದೇಶ ಹೊರಡಿಸಿದ್ದಾರೆ.
ಕೇಂದ್ರ ಸರ್ಕಾರದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಾಗೂ ಸಿ.ಪಿ.ಐ.ಎಂ, ಸಿ..ಪಿಐ., ಎಸ್.ಯು.ಸಿ.ಐ., ಕೆ.ಎಸ್.ಆರ್.ಟಿ.ಸಿ. ಸ್ಟಾಫ್ ಮತ್ತು ವರ್ಕರ್ಸ್ ಫೆಡರೇಷನ್, ಎ.ಐ.ಟಿ.ಯು.ಸಿ., ಜೆ.ಡಿ.ಎಸ್ ಪಕ್ಷ, ದಲಿತ ಸಂಘಟನೆಗಳು, ಕಲಬುರ್ಗಿ ಜಿಲ್ಲಾ ಲಾರಿ ಮಾಲೀಕರ ಸಂಘ ಹಾಗೂ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಜಿಲ್ಲೆಯಾದ್ಯಂತ ಸೆಪ್ಟೆಂಬರ್ 10 ರಂದು ಬಂದ್ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನೀಡಿರುವ ವರದಿಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಜಿಲ್ಲೆಯಾದ್ಯಂತ ಆಚರಿಸುವ ಬಂದ್ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಹಾಗೂ ಮುಂಜಾಗ್ರತಾ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಲಾಗಿದೆ.