ಹೊಸಪೇಟೆ (ವಿಜಯನಗರ): ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ಜಲಾಶಯಕ್ಕೆ ಭರ್ಜರಿ ನೀರು ಹರಿದುಬರುತ್ತಿದ್ದು, ಒಳಹರಿವಿನ ಪ್ರಮಾಣ 1.12 ಲಕ್ಷ ಕ್ಯುಸೆಕ್‌ನಷ್ಟಿದ್ದು, ಅಣೆಕಟ್ಟೆ ಭರ್ತಿಯಾಗಲು ಇನ್ನು ಒಂಭತ್ತು ಅಡಿಯಷ್ಟೇ ಬಾಕಿ ಇದೆ.
ಇದೇ ಪ್ರಮಾಣದಲ್ಲಿ ಮಳೆ ಸುರಿದರೆ ನಾಲ್ಕೈದು ದಿನಗಳೊಳಗೆ ಜಲಾಶಯ ಭರ್ತಿಯಾಗುವ ಸಾಧ್ಯತೆಯಿದೆ. ಆದ್ದರಿಂದ ಇದೀಗ ಸ್ವಲ್ಪ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿಸುವ ನಿರೀಕ್ಷೆಯಿದೆ.
ಇನ್ನೂ ನದಿಗೆ ನೀರು ಬಿಡುವ ಕಾರಣ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ತುಂಗಭದ್ರಾ ಮಂಡಳಿ ಪ್ರಕರಣೆಯಲ್ಲಿ ತಿಳಿಸಿದೆ. ಆದರೆ ನಿಗದಿಯಂತೆ 9 ಗಂಟೆಗೆ ನದಿಗೆ ನೀರು ಹರಿಸಿಲ್ಲ. ಬಹುತೇಕ ಸಂಜೆಯ ವೇಳೆಗೆ ಅಥವಾ ಸೋಮವಾರ ನದಿಗೆ ನೀರು ಹರಿಯಬಿಡುವ ಸಾಧ್ಯತೆ ಇದೆ ಎಂದು ಮಂಡಳಿಯ ಮೂಲಗಳು ತಿಳಿಸಿವೆ.
ಇಂದು ಬೆಳಿಗ್ಗೆ ಹೊಸಪೇಟೆ ನಗರದಲ್ಲಿ ಸುಮಾರು ಅರ್ಧ ಗಂಟೆ ಬಿರುಸಿನ ಮಳೆಯಾಗಿದೆ.