ವಿಜಯಪುರ: ಕಳೆದೊಂದು ತಿಂಗಳಿನಿಂದ ವಿಜಯಪುರ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಭೂಮಿಯಿಂದ ವಿಚಿತ್ರ ಶಬ್ದ ಕೇಳಿಬರುತ್ತಿದ್ದು, ಜನರು ಬೆಚ್ಚಿಬಿದ್ದಿದ್ದಾರೆ.
ಬಸವನಬಾಗೇವಾಡಿ ತಾಲೂಕಿನ ಹುಣಸ್ಯಾಳ, ಕರಭಂಟ ಪಿಬಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಭೂಮಿಯಿಂದ ಭಾರೀ ಸದ್ದು ಕೇಳಿಬರುತ್ತಿದೆ. ಈ ಹಿಂದೆ ಕೂಡ ಕೆಲವು ಗ್ರಾಮಗಳಲ್ಲಿ ಇದೇ ರೀತಿ ಶಬ್ದ ಕೇಳಿಬಂದಿತ್ತು. ನಿನ್ನೆ ತಡರಾತ್ರಿ ಕೂಡ ಬಸನಬಾಗೇವಾಡಿ ತಾಲೂಕಿನ ಹಲವು ಗ್ರಾಮಗಳಲ್ಲಿ ಭಾರೀ ಶಬ್ದ ಕೇಳಿ ಬಂದಿರುವ ಕಾರಣ, ಭೂಕಂಪನದ ಆತಂಕದಿಂದ ಗ್ರಾಮಸ್ಥರು ಬೀದಿಯಲ್ಲೇ ರಾತ್ರಿ ಕಳೆದಿದ್ದಾರೆ.
ಭೂಮಿಯಿಂದ ಸದ್ದು ಕೇಳಿಬಂದ ಹಿನ್ನೆಲೆಯಲ್ಲಿ ಭೂಕಪಂನ ಆಗಿದೆ ಎಂದು ಭಯದಿಂದ ಮನೆಯಿಂದ ಹೊರಬಂದ ಗ್ರಾಮಸ್ಥರು ಬೀದಿಯಲ್ಲೇ ಆತಂಕದಿಂದ ರಾತ್ರಿ ಕಳೆದಿದ್ದಾರೆ. ಈ ಹಿಂದೆ ಜಿಲ್ಲೆಯ ಮಲಘಾಣ, ಮಸೂತಿ, ಅಡವಿ ಸಂಗಾಪುರ, ಮನಗೂಳಿ, ಉಕ್ಕಲಿ ಸೇರಿದಂತೆ ಹಲವೆಡೆ ಇದೇ ರೀತಿ ಶಬ್ದ ಉಂಟಾಗಿತ್ತು.
ಕಳೆದ ವರ್ಷ ಕೂಡ ಭೂಮಿ ಕಂಪಿಸುವುದರ ಜತೆಗೆ ಕೆಲವು ಮನೆಗಳು ಬಿರುಕು ಬಿಟ್ಟಿದ್ದವು. ಹಾಗೇ ಮೇಲ್ಚಾವಣಿಗಳಿಂದ ಮಣ್ಣು ಉದುರಿಬಿದ್ದಿದ್ದು, ಜನರೆಲ್ಲ ಮನೆಗಳಿಂದ ಹೊರಗೆ ಓಡಿ ಬಂದಿದ್ದರು. ಆಗ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದ ಭೂವಿಜ್ಞಾನಿಗಳು, ಇದು ಭೂಕಂಪವಲ್ಲ, ಭೂಮಿಯ ಪದರುಗಳ ಚಲನೆಯಿಂದ ಶಬ್ದ ಆಗಿದ್ದು ಎಂದು ತಿಳಿಸಿದ್ದರು. ಇದೀಗ ಅನೇಕ ಗ್ರಾಮಗಳಲ್ಲಿ ಹೀಗೆಯೇ ಆಗುತ್ತಿರುವುದು ಆತಂಕ ಮೂಡಿಸಿದೆ.