ಬೇಸಿಗೆ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸೂಚನೆ ನೀಡಿದ್ದಾರೆ.
ಕೊಳವೆಬಾವಿ ಕೊರೆದು ಮೋಟರ್ ಅಳವಡಿಕೆ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸಬೇಕಿರುವ 46 ಪ್ರಕರಣಗಳಲ್ಲಿ 15 ದಿನದಲ್ಲಿ ತ್ವರಿತವಾಗಿ ಸಂಪರ್ಕ ನೀಡುವಂತೆ ಕೆಡಿಪಿ ಸಭೆಯಲ್ಲಿ ಶುಕ್ರವಾರ ಸೂಚನೆ ನೀಡಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಎರಡು ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದೆ. ಅವುಗಳಿಗೆ ಶೀಘ್ರದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿಸಲಾಗುವುದು. ನೆಲಮಂಗಲದ ಒಂದು ಯೋಜನೆಗೆ ಅನುಮೋದನೆ ಸಿಕ್ಕಿದೆ. ಆದಷ್ಟು ಬೇಗ ಕಾಮಗಾರಿಗೆ ಚಾಲನೆ ನೀಡಲಾಗುವುದು. ಕುಡಿಯುವ ನೀರಿನ ಕಾಮಗಾರಿಗಳಿಗೆ ಟಾಸ್ಕ್‌ಫೋರ್ಸ್ ಕಮಿಟಿಗೆ ಪ್ರಸ್ತಾವನೆ ಸಲ್ಲಿಸಿದ ಬಳಿಕವೇ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ತಿಳಿಸಿದರು.
ಅಧಿಕಾರಿಗಳೇ ಹೊಣೆ : ಇಲಾಖೆ ಅಧಿಕಾರಿಗಳು ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಮುಗಿಸದಿದ್ದರೆ ಗುತ್ತಿಗೆದಾರ ಗುಣಮಟ್ಟದ ಕೆಲಸ ಮಾಡುವುದಿಲ್ಲ. ವಿಳಂಬದಿಂದ ದರ ಏರಿಕೆ ಆಗುತ್ತದೆ. ಈ ರೀತಿ ಕಾಮಗಾರಿ ಅರ್ಧಕ್ಕೆ ನಿಂತರೆ ಸಂಬಧಪಟ್ಟ ಅಧಿಕಾರಿಗಳನ್ನೇ ಹೊಣೆ ಮಾಡಬೇಕಾಗುತ್ತದೆ ಎಂದು ಸಚಿವರು ಎಚ್ಚರಿಕೆ ನೀಡಿದರು.
ಸದ್ಯ ವಿಳಂಬಗತಿಯಲ್ಲಿ ಸಾಗಿರುವ ಹೊಸಕೋಟೆ ತಾಲ್ಲೂಕಿನ ರಸ್ತೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿಗೆ ನೀಡಿರುವ ಅನುದಾನದಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳ ವಿವರ ನೀಡಲು ವಿಫಲರಾದ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಚಿವರು, ಇನ್ನು ಮುಂದೆ ಮಾಹಿತಿ ಇಲ್ಲದೆ ಸಭೆಗೆ ಬಂದರೆ ಶಿಸ್ತುಕ್ರಮಕ್ಕೆ ಸೂಚಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವೈದ್ಯರ ಕೊರತೆ ಇಲ್ಲ : 48 ಪಿಎಚ್‌ಸಿಗಳಲ್ಲಿ ವೈದ್ಯರ ಕೊರತೆ ಇಲ್ಲ. ನಿನ್ನೆ ಒಬ್ಬ ವೈದ್ಯರ ವರ್ಗಾವಣೆ ಆಗಿದೆ. ತಜ್ಞರ ಹುದ್ದೆಗಳು ಕೊರತೆ ಇಲ್ಲ. ಹೊಸಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಇರುವ ಒಬ್ಬಅರವಳಿಕೆ ತಜ್ಞರಿಗೆ ಒತ್ತಡ ಇರುವುದರಿಂದ ಎನ್‌ಎಚ್‌ಎಂ ಮೂಲಕ ಹೆಚ್ಚುವರಿಯಾಗಿ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಕೋವಿಡ್ ಲಸಿಕಾಕರಣ ತೃಪ್ತಿಕರವಾಗಿದೆ. ಮಕ್ಕಳ ಲಸಿಕಾಕರಣ ಇನ್ನಷ್ಟು ಚುರುಕಗೊಳಿಸಬೇಕು. 11.65 ಲಕ್ಷದಷ್ಟಿರುವ ಜನಸಂಖ್ಯೆ ಪೈಕಿ 3.90 ಜನರಿಗೆ ಎಬಿ-ಎಆರ್‌ಕೆ ಕಾರ್ಡುಗಳನ್ನು ವಿತರಿಸಲಾಗಿದೆ. ಬಾಕಿಯಿರುವವರಿಗೆ ಚುರುಕಿನಿಂದ ವಿತರಿಸುವ ಕೆಲಸ ಆಗಬೇಕು. ಡಿಸಿ ಮತ್ತು ಸಿಇಒ ಅವರು ಸಮನ್ವಯದೊಂದಿಗೆ ಕೆಲಸ ಮಾಡಬೇಕು. ಅತ್ಯುತ್ತಮ ಕಾರ್ಯಕ್ರಮ, ಚುನಾಯಿತ ಪ್ರತಿನಿಧಿಗಳ ಸಹಕಾರವು ಬೇಕಾಗುತ್ತದೆ. ಐದು ಲಕ್ಷ ರೂ. ಮೌಲ್ಯದ ಚಿಕಿತ್ಸೆ ಪಡೆಯಲು ಅವಕಾಶವಿದೆ. ಇದನ್ನುಆದ್ಯತೆ ಮೇರೆಗೆ ಸಮರೋಪಾದಿಯಲ್ಲಿ ವಿತರಿಸಬೇಕು ಎಂದು ಸೂಚಿಸಿದರು.
ಜನೌಷಧಿ ಕೇಂದ್ರ : ಜನೌಷಧಿ ಕೇಂದ್ರಗಳಲ್ಲಿ ಸಮರ್ಪಕವಾಗಿ ಔಷಧಿಗಳು ಇರುವುದಿಲ್ಲ ಮತ್ತು ನಿಯಮಿತವಾಗಿ ತೆರೆಯುವುದಿಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ ಅವರ ದೂರಿನ ಹಿನ್ನಲೆಯಲ್ಲಿ ಎಲ್ಲಾ ಜನೌಷಧಿ ಕೇಂದ್ರಗಳ ಮಾಲೀಕರ ಸಭೆ ಕರೆದು ನಿಯಮಿತವಾಗಿ ತೆರೆಯದ ಮತ್ತು ದಾಸ್ತಾನು ಇಟ್ಟುಕೊಳ್ಳದವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಬೇಕು. ಗುರಿ ನಿಗದಿ ಪಡಿಸುವ ಜತೆಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಬೇಕು ಎಂದು ತಾಕೀತು ನೀಡಿದರು.
ಆದಷ್ಟು ಬೇಗ ಜಿಲ್ಲಾಸ್ಪತ್ರೆ ಕಟ್ಟಡಕ್ಕೆ ಶಿಲಾನ್ಯಾಸ ಮಾಡಲಾಗುವುದು. ನೆಲಮಂಗಲ ಮತ್ತು ಹೊಸಕೋಟೆಯಲ್ಲಿ ತಾಯಿ ಮತ್ತು ಮಗುವಿನ ಆಸ್ಪತ್ರೆಗೆ ಮಂಜೂರಾತಿ ನೀಡಲಾಗಿದೆ ಎಂದರು. ಸಚಿವ ನಾಗರಾಜು ಅವರು ಇದಕ್ಕೆ ದನಿಗೂಡಿಸಿ ಈ ಹಿಂದೆಯೇ ತಾಲ್ಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೆರಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.