Publish Date: Wed, 27 Sep 2017 (15:58 IST)
Updated Date: Wed, 27 Sep 2017 (16:02 IST)
ಕಲಬುರ್ಗಿ: ಯಡಿಯೂರಪ್ಪ ಅಲ್ಲ ಬೇರೆ ಯಾರೇ ಬಲಿಷ್ಠ ನಾಯಕರು ಸ್ಪರ್ಧಿಸಿದರು ಹೆದರುವುದಿಲ್ಲ. ಓಡಿ ಹೋಗುವುದು ಕಾಂಗ್ರೆಸ್ ಅಥವಾ ಉಮಾಶ್ರೀ ಜಾಯಮಾನದಲ್ಲಿ ಇಲ್ಲ ಎಂದು ಸಚಿವೆ ಉಮಾಶ್ರೀ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎದುರಾಳಿ ಯಾರೇ ಆದರೂ ತೆರದಾಳ ಕ್ಷೇತ್ರ ಬದಲಾವಣೆ ಪ್ರಶ್ನೆಯೇ ಇಲ್ಲ. 2008ರ ಚುನಾವಣೆಯಲ್ಲಿ ಉಮಾಶ್ರೀ ಗೆಲುವು ಸಾಧಿಸಿದರೆ ಅವರು ಕ್ಷೇತ್ರದಲ್ಲಿ ಇರುವುದಿಲ್ಲ ಎಂದು ಬಿಜೆಪಿಯವರು ಅಪಪ್ರಚಾರ ಮಾಡಿದ್ದರು. ಆದರೂ ಅಲ್ಲಿಯೇ ಇದ್ದು ಗೆಲುವು ಸಾಧಿಸಿ ತೋರಿಸಿದ್ದೇನೆ. ಸೋಲು ಗೆಲುವು ಒಪ್ಪಿಕೊಳ್ಳುವ ಮನಸ್ಥಿತಿ ನಮ್ಮಲ್ಲಿದೆ. ಅಂಜಿಕೆ ಅಳಕು ನಮ್ಮಲ್ಲಿಲ್ಲ. ಯಾರೇ ಸ್ಪರ್ಧಿಸಿದರೂ ಹೆದರುವುದಿಲ್ಲ ಎಂದು ಹೇಳಿದರು.
ಅ.2 ರಂದು ರಾಜ್ಯದಾದ್ಯಂತ ಮಾತೃಪೂರ್ಣ ಯೋಜನೆ ಜಾರಿ ತರಲಾಗುತ್ತಿದೆ. ಯೋಜನೆ ಅಡಿ ಸುಮಾರು 10 ಲಕ್ಷ ಗರ್ಭಿಣಿ, ಬಾಣಂತಿಯರಿಗೆ ಪೌಷ್ಠಿಕ ಆಹಾರ ನೀಡಲಾಗುವುದು. ಇದಕ್ಕಾಗಿ ರಾಜ್ಯ ಸರ್ಕಾರ 102 ಕೋಟಿ ಹಣ ಮೀಸಲು ಇಟ್ಟಿರುವುದಾಗಿ ತಿಳಿಸಿದರು.
ನವೆಂಬರ್ 1 ಅಥವಾ ವಿಶ್ವ ಕನ್ನಡ ಸಮ್ಮೇಳನ ಸಂದರ್ಭದಲ್ಲಿ ನಾಡಗೀತೆ ಅವಧಿ ಕಡಿತಗೊಳ್ಳಲಿದೆ. ಈಗಾಗಲೇ ಈ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಲಾಗಿದೆ. ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಎರಡು ನಿಮಿಷಗಳ ಅವಧಿಯ ನಾಡಗೀತೆ ಆಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಉಮಾಶ್ರೀ ಹೇಳಿದರು.