ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಯಿಂದ ನನಗೆ ಭಯ ಆಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಶಾಂತ ರಾಜಕಾರಣ ಮಾಡುತ್ತಿದ್ದೇನೆ. ಸ್ಟ್ರಾಂಗ್ ಆಗಿ ರಾಜಕಾರಣ ಮಾಡಿದರೆ ಅವರು ಸಹಿಸಿಕೊಳ್ಳಲು ಆಗಲ್ಲ ಎಂಬ ಹೇಳಿಕೆಗೆ ಈ ರೀತಿ ತಿರುಗೇಟು ನೀಡಿದರು.
ಪಿಎಸ್ ಐ ಪರೀಕ್ಷಾ ಅಕ್ರಮದಲ್ಲಿ ಸಚಿವರ ಪುತ್ರ ಭಾಗಿಯಾಗಿರುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಆದರೆ ನಾನು ಅವರ ಹೆಸರು ಹೇಳಲ್ಲ. ಸಿಐಡಿಯವರು ಎಷ್ಟು ಪ್ರಮಾಣಿಕವಾಗಿ ತನಿಖೆ ಮಾಡುತ್ತಾರೆ ನೋಡೋಣ ಎಂದು ಅವರು ಹೇಳಿದರು.
ಅಧಿಕಾರಿಗಳು ನನಗೆ ನೋಟಿಸ್ ಕೊಟ್ಟಿದ್ದಾರೆ. ಯಾಕೆ ಆಂತ ಗೊತ್ತಿಲ್ಲ. ವಿಚಾರಣೆ ಮಾಡುವುವರನ್ನು ಬಿಟ್ಟು ನನಗೆ ಯಾಕೆ ಕೊಟ್ಟಿದ್ದಾರೆ ಗೊತ್ತಿಲ್ಲ. ಇದಕ್ಕೆಲ್ಲ ಹೆದರುವ ಪ್ರಶ್ನೆಯೇ ಇಲ್ಲ. ನನಗೆ ನೋಟಿಸ್ ಕೊಟ್ಟಿರುವುದು ಮಾಧ್ಯಮಗಳಿಗೆ ಗೊತ್ತಾಗಿದೆ. ಆದರೆ ಇನ್ನೆಷ್ಟು ಜನರಿಗೆ ಹೀಗೆ ನೋಟಿಸ್ ಕೊಟ್ಟಿದ್ದಾರೆ ಗೊತ್ತಿಲ್ಲ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದರು.
ಸಿಎಂ ಎದುರಿಗೆ ರಾಮನಗರದವರೆಲ್ಲ ಗಂಡಸರಾ ಅಂತಾ ಸಚಿವರೊಬ್ಬರು ಹೇಳಿದ್ದಾರೆ. ನನಗೆ ಭಯ ಆಗುತ್ತಿದೆ. ನಾವೆಲ್ಲ ಗಡಗಡ ನಡುಗುತ್ತಿದ್ದೇವೆ. ನಾವೆಲ್ಲ ಗಂಡಸರಲ್ಲ. ನಾವು ಹೆಂಗಸರೇ, ಹೀಗಾಗಿ ನಮಗೆ ಭಯ ಇದೆ ಎಂದು ಅವರು ಹೇಳಿದರು.
ಮಾಗಡಿಯಲ್ಲಿ ಒಂದೇ ತಾಲೂಕಿನ ಮೂವರಿಗೆ ರ್ಯಾಂಕ್ ಬಂದಿದೆ. ಅಭ್ಯರ್ಥಿಗಳು ಆಸ್ತಿ ಮಾರಿ ಹಣ ಕೊಟ್ಟಿದ್ಧಾರೆ. ಈಗ ಮರು ಪರೀಕ್ಷೆ ಅಂತ ಘೋಷಣೆ ಮಾಡಿದ್ದರಿಂದ ಅಭ್ಯರ್ಥಿಯೊಬ್ಬರ ತಂದೆ ಪ್ಯಾರಲಿಸಿಸ್ ಆಗಿದ್ದಾರೆ ಎಂದು ಡಿಕೆಶಿ ಆರೋಪಿಸಿದರು.