ಬೆಂಗಳೂರು: ಇವತ್ತು ಆದಾಯ ತೆರಿಗೆ ಇಲಾಖೆ ವಿಚಾರಣೆಗೆ ಹೋಗುವುದಿಲ್ಲ. ಅಧಿಕಾರಿಗಳೇ ಬೇಡ ಎಂದಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿರುವಂತೆ ಇಡಿ ತನಿಖೆ, ಸಿಬಿಐನಿಂದ ಆಸ್ತಿ ಮುಟ್ಟುಗೋಲು ಯಾವುದೂ ಇಲ್ಲ. ನಾನು ಕನಕಪುರದ ಬಂಡೆ ಇದ್ದಂತೆ. ತಲೆ ಚಚ್ಚಿಕೊಂಡ್ರೆ ತಲೆಗೆ ಪೆಟ್ಟಾಗೋದು ಹೊರತು ಬಂಡೆಗಲ್ಲ ಎಂದು ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಇನ್ನು ನೋಟು ಅಮಾನ್ಯೀಕರಣಕ್ಕೆ ಒಂದು ವರ್ಷವಾದ ಹಿನ್ನೆಲೆಯಲ್ಲಿ ನೋಟು ರದ್ದಿನಿಂದ ದೇಶ ಬಡವಾಗಿದೆ. ಸಾವಿರಾರು ಜನ ಕೆಲಸ ಕಳೆದುಕೊಂಡಿದ್ದು, ನೂರಾರು ಜನ ಸತ್ತಿದ್ದಾರೆ. ಮದುವೆ ವೆಚ್ಚಕ್ಕೂ ಕಡಿವಾಣ ಹಾಕಲಾಗಿದೆ. ಮಹಿಳೆಯರು ಚಿನ್ನ ಕೊಳ್ಳುವುದಕ್ಕೂ ಅಡ್ಡಿಯಾಯ್ತು. ನಿಜಕ್ಕೂ ಇದು ಕರಾಳ. ನಾಳೆ ಕಾಂಗ್ರೆಸ್ ನಿಂದಲೂ ನೋಟು ರದ್ದು ಖಂಡಿಸಿ ಪ್ರತಿಭಟನೆ ನಡೆಸಲಾಗುವುದು ಎಂದರು.