ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನವನ್ನು ಕಲಬುರಗಿ ನಗರ ಮತ್ತು ಜಿಲ್ಲೆಯಾದ್ಯಂತ ಸೆಪ್ಟೆಂಬರ್ 17ದಂದು ಸೋಮವಾರ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಯಿತು.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ಹೈ-ಕ ವಿಮೋಚನಾ ದಿನಾಚರಣೆ ಕಾರ್ಯಕ್ರಮಕ್ಕೆ ಆಹ್ವಾನಿಸುವಂತೆ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರ ಅಧ್ಯಕ್ಷತೆಯಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಹೈದ್ರಾಬಾದ ಕರ್ನಾಟಕ ಪ್ರದೇಶ ವಿಮೋಚನಾ ದಿನಾಚರಣೆಯ ಪೂರ್ವಭಾವಿ ಸಿದ್ಧತಾ ಸಭೆಯು ತೀರ್ಮಾನಿಸಿತು.
ಹೈದ್ರಾಬಾದ ಕರ್ನಾಟಕ ದಿನಾಚರಣೆಯ ಮುಂಚಿತವಾಗಿ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಲ್ಲಿ ಹೈದ್ರಾಬಾದ್ ಕರ್ನಾಟಕ ವಿಮೋಚನೆ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಲು ವಿವಿಧ ಭಾಷಣ, ಚರ್ಚೆ ಹಾಗೂ ನಿಬಂಧ ಸ್ಪರ್ಧೆಗಳನ್ನು ಏರ್ಪಡಿಸಬೇಕು.
ದಿನಾಚರಣೆಯ ಅಂಗವಾಗಿ ಅಂದು ಬೆಳಿಗ್ಗೆ 8.30 ಗಂಟೆಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುತ್ಥಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಲಾರ್ಪಣೆ ಮಾಡುವರು. ನಂತರ ಕಲಬುರಗಿಯ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ(ಡಿ.ಎ.ಆರ್.) ಮೈದಾನದಲ್ಲಿ ಬೆಳಗಿನ 9 ಗಂಟೆಗೆ ಹೈದ್ರಾಬಾದ ಕರ್ನಾಟಕ ವಿಮೋಚನೆ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯಲ್ಲಿ ಪಾಲ್ಗೊಂಡ ಸ್ವಾತಂತ್ರ್ಯ ಯೋಧರಿಗೆ ಸನ್ಮಾನಿಸಲಾಗುವುದು.
ಈ ಬಾರಿ ಶಾಲಾ-ಕಾಲೇಜು ಮಕ್ಕಳಿಂದ ಸಂಗೊಳ್ಳಿ ರಾಯಣ್ಣನ ಕುರಿತು ರೂಪಕವನ್ನು ಪ್ರದರ್ಶಿಸಲು ಸಿದ್ಧತೆ ನಡೆಸಲಾಗುತ್ತಿದೆ. ಅದೇ ರೀತಿ ಹೈದ್ರಾಬಾದ ಕರ್ನಾಟಕ ವಿಮೋಚನೆಗೆ ಸಂಬಂಧಿಸಿದ ಸ್ವಾರಸ್ಯಕರ ಸಂದರ್ಭಗಳನ್ನು ಹೈದ್ರಾಬಾದ ಕರ್ನಾಟಕ ವಿಮೋಚನಾ ಸಮಿತಿಯಿಂದ ಒದಗಿಸಿದ್ದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲು ಅನುಕೂಲವಾಗುವುದು ಎಂದರು.