Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕೋಲಾರದ ಚಿಕ್ಕತಿರುಪತಿಯ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಹುಂಡಿ ಎಣಿಕೆ ಮಾಡುತ್ತಿದ್ದು, ಹುಂಡಿ ಎಣಿಕೆ ವೇಳೆ ಭಕ್ತರು ದೇವರಿಗೆ ಬರೆದಿರುವ ವಿಚಿತ್ರ ಪತ್ರವೊಂದು ಪತ್ತೆಯಾಗಿದೆ. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಚಿಕ್ಕತಿರುಪತಿಯ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯದ ಹುಂಡಿ ಎಣಿಕೆ ಮಾಡುವಾಗ, ನಿಶ್ಚಿತಾರ್ಥವಾಗಿರುವ ಮದುವೆ ಮುರಿದು ಬೀಳಲಿ ಎಂದು ದೇವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಇನ್ನು ಪತ್ರದಲ್ಲಿ ಮದುವೆಯಾಗಬೇಕಿರುವ ವಧು ಸೇರಿದಂತೆ ಅವರ ಕುಟುಂಬಸ್ಥರ ಐವರ ಹೆಸರುಗಳನ್ನ ಬರೆದು ಇವರಿಗೆ ಶಿಕ್ಷೆ ಕೊಡು ಎಂದು ಪತ್ರ ಬರೆಯುವ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ನನಗಾಗಲಿ ನನ್ನ ಕುಟುಂಬಸ್ಥರಿಗಾಗಲೀ ಅವರಿಂದ ತೊಂದರೆ ಆಗದಂತೆ ಕಾಪಾಡು ಎಂದು ಮನವಿ ಮಾಡಿದ್ದು, ನಿಶ್ಚಿತಾರ್ಥ ಮುರಿದು ಬೀಳಲಿ, ಕೋರ್ಟ್, ಕೇಸ್ ಎನ್ನದೆ ಸಂಧಾನಕ್ಕೆ ಬರಲೆಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಜೊತೆಗೆ ಮುರಿದು ಬಿದ್ದ ನಂತರ ನಿಶ್ಚಿತಾರ್ಥದ ಖರ್ಚು ಬಂದು ತೆಗೆದುಕೊಂಡು ಹೋಗಲಿ, ಮತ್ತೆ ಜೀವನದಲ್ಲಿ ಅವರ ಮುಖವನ್ನು ನಾವು ನೋಡದಂತೆ ಮಾಡು ಎಂದು ಪತ್ರದ ಮುಖೇನ ದೇವರಲ್ಲಿ ಬೇಡಿಕೊಳ್ಳಲಾಗಿದೆ. ಇನ್ನು ಪ್ರತಿಬಾರಿಯೂ ಹುಂಡಿ ಎಣಿಕೆ ವೇಳೆ ಈ ರೀತಿಯ ವಿಚಿತ್ರ ಪತ್ರಗಳು ಪತ್ತೆಯಾಗುತ್ತಿದ್ದು, ಅಮಾನ್ಯಗೊಂಡ ಹಳೆಯ ನೋಟುಗಳು, ವಿದೇಶಿ ಕರೆನ್ಸಿ ಸೇರಿದಂತೆ ಇತರೆ ವಸ್ತುಗಳನ್ನ ದೇವರಿಗೆ ಹುಂಡಿಯಲ್ಲಿ ಹಾಕುವ ಮೂಲಕ ಸಮರ್ಪಣೆ ಮಾಡುತ್ತಾರೆ.