ಬೆಂಗಳೂರು: ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಸದವರಿಗೆ ಕರ್ನಾಟಕ ಹೈಕೋರ್ಟ್ ಸಿಹಿ ಸುದ್ದಿ ನೀಡಿದ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರವೂ ಗುಡ್ನ್ಯೂಸ್ ನೀಡಿದೆ.
ಕರ್ನಾಟಕ ಹೈಕೋರ್ಟ್ ಜುಲೈ 4ರ ವರೆಗೆ ಹೆಚ್ಎಸ್‌ಆರ್‌ಪಿ ನಂಬರ್ ಪ್ಲೇಟ್ ಅವಕಾಶ ನೀಡಿತ್ತು. ಆದ್ರೆ, ಇದೀಗ ರಾಜ್ಯ ಸರ್ಕಾರವೇ , ಹೆಚ್ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸದವರಿಗೆ ಮೂರು ತಿಂಗಳ ಕಾಲಾವಕಾಶ ನೀಡಿದೆ. ಇದರಿಂದ ಇನ್ನೂ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳದಿರುವ ವಾಹನ ಸವಾರರು ನಿರಾಳರಾಗಿದ್ದಾರೆ.
ಕರ್ನಾಟಕದಲ್ಲಿ ಹೆಚ್ಎಸ್‌ಆರ್‌ಪಿ ಅಳವಡಿಕೆಗೆ ಈಗಾಗಲೇ ಎರಡ್ಮೂರು ಬಾರಿ ಅವಧಿ ವಿಸ್ತರಣೆ ಮಾಡಿದ್ದು, ಜೂನ್ 12ಕ್ಕೆ ಡೆಡ್‌ಲೈನ್ ಕೊನೆಗೊಂಡಿದೆ. ಆದರೆ, ಕರ್ನಾಟಕ ಹೈಕೋರ್ಟ್ ಹೆಚ್ಎಸ್‌ಆರ್‌ಪಿ ಅಳವಡಿಸದವರ ವಿರುದ್ಧ ಜುಲೈ 4ರ ವರೆಗೆ ಯಾವುದೇ ಕ್ರಮಗಳನ್ನು ಕೈಗೊಳ್ಳದಂತೆ ರಾಜ್ಯ ಸರ್ಕಾರವು ನಿರ್ದೇಶನ ನೀಡಿತ್ತು. ಅಲ್ಲದೆ, ಹೆಚ್‌ಎಸ್‌ಆರ್‌ಪಿ ಅಳವಡಿಕೆಯ ಗಡುವನ್ನು ವಿಸ್ತರಿಸಲು ಒಪ್ಪಿಗೆ ನೀಡಿತ್ತು.
ಇದರ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಆಳವಡಿಕೆಗೆ ಸೆಪ್ಟೆಂಬರ್ 15ರ ವರೆಗೆ ಕಾಲಾವಕಾಶ ನೀಡಿದೆ.
ಏನಿದು ಎಚ್‌ಎಸ್‌ಆರ್‌ಪಿ: ರಾಜ್ಯದಲ್ಲಿ 2019ರ ಏಪ್ರಿಲ್ 1ಕ್ಕಿಂತ ಮುನ್ನ ನೋಂದಣಿಯಾದ ವಾಹನಗಳಿಗೆ ಮೂಲ ಉಪಕರಣ ತಯಾರಕ (ಓಇಎಂ) ಅಧಿಕೃತ ಡೀಲರ್‌ಗಳ ಮೂಲಕ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಲು ರಾಜ್ಯ ಸರಕಾರ 2023ರ ಆಗಸ್ಟ್ 17ರಂದು ಅಧಿಸೂಚನೆ ಹೊರಡಿಸಿದೆ.