ಬೆಂಗಳೂರು: ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ಒಮ್ಮಿಂದಲೇ ಆಗಬೇಕು ಎಂದರೆ ನಾನೇನು ನೋಟು ಪ್ರಿಂಟ್ ಮಾಡ್ಲಾ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ವಿವಿಧ ಬೇಡಿಕೆ ಈಡೇರಿಕೆಗೆ ಮುಖ್ಯಮಂತ್ರಿಗಳಿಗೆ ಕರ್ನಾಟಕ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದ್ದಾರೆ. ಇದರಿಂದ ಸಿಎಂ ಸಿದ್ದರಾಮಯ್ಯ ಸಿಟ್ಟು ಮಾಡಿಕೊಂಡರು. ಬಿಜೆಪಿ ಅವಧಿಯಲ್ಲಿ ಬಿಲ್ ಪಾವತಿ ಬಾಕಿ ಸಾಕಷ್ಟಾಗಿದೆ. ಈಗ ನೀವು ಒಟ್ಟಿಗೇ ಎಲ್ಲಾ ಬಿಲ್ ಪಾವತಿ ಮಾಡಬೇಕು ಎಂದರೆ ನಾನು ನೋಟ್ ಪ್ರಿಂಟ್ ಮಾಡ್ಲಾ ಎಂದು ಆಕ್ರೋಶ ಹೊರಹಾಕಿದರು.
ರಾಜ್ಯ ಗುತ್ತಿಗೆದಾರರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ದುಡ್ಡಿಲ್ಲದೇ ಇದ್ದರೂ ಬೋರ್ಡ್ ಮೀಟಿಂಗ್ ಕರೆದು 1 ಲಕ್ಷದ 20 ಸಾವಿರ ಕೋಟಿ ರೂ.ವರೆಗೆ ಟೆಂಡರ್ ಕರೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಗುತ್ತಿಗೆದಾರರ ಪ್ಯಾಕೇಜ್ ಸಿಸ್ಟಂನ್ನು ಹಂತ ಹಂತವಾಗಿ ಕಡಿಮೆ ಮಾಡಲಾಗುವುದು. ಆ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ. ಬೇರೆ ರಾಜ್ಯದ ಗುತ್ತಿಗೆದಾರರ ಬದಲಾಗಿ ನಮ್ಮ ರಾಜ್ಯದ ಗುತ್ತಿಗೆದಾರರಿಗೇ ಅವಕಾಶ ನೀಡಲಾಗುವುದು. ಒಮ್ಮೆಲೇ ಈ ಕೆಲಸ ಮಾಡಲಾಗದು. ಹಂತ ಹಂತವಾಗಿ ಮಾಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಣ್ಣ ಗುತ್ತಿಗೆದಾರರನ್ನು ಉಳಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಸಣ್ಣ ಗುತ್ತಿಗೆದಾರರ ಅನುಕೂಲಕ್ಕಾಗಿ ಕ್ಷೇತ್ರವಾರು 25 ಕೋಟಿಯಂತೆ 4 ಸಾವಿರ ಕೋಟಿ ರೂ. ಕಾಮಗಾರಿ ನೀಡಲು ಲೋಕಪಯೋಗಿ ಸಚಿವರಿಗೆ ಸೂಚಿಸಿದ್ದೇನೆ ಎಂದರು. ಅಲ್ಲದೆ ಗುತ್ತಿಗೆದಾರರ ಭವನಕ್ಕೆ ಅನುದಾನ ನೀಡುವ ಬಗ್ಗೆಯೂ ಭರವಸೆ ನೀಡಿದ್ದಾರೆ.