Publish Date: Wed, 01 Jul 2026 (09:56 IST)
Updated Date: Wed, 01 Jul 2026 (10:00 IST)
ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ 'ಗೃಹ ಜ್ಯೋತಿ' ಯೋಜನೆಯ ಫಲಾನುಭವಿಗಳ ಮರುಪರಿಶೀಲನೆ ಮತ್ತು ಗಣತಿ ಪ್ರಕ್ರಿಯೆಯು ಇಂದಿನಿಂದ ರಾಜ್ಯಾದ್ಯಂತ ಅಧಿಕೃತವಾಗಿ ಆರಂಭವಾಗಿದೆ.
ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪುವಂತೆ ಮಾಡಲು ಹಾಗೂ ನಕಲಿ ಅಥವಾ ವಾಣಿಜ್ಯ ಬಳಕೆಯ ಸಂಪರ್ಕಗಳನ್ನು ತಡೆಗಟ್ಟಲು ಇಂಧನ ಇಲಾಖೆಯ ಸಿಬ್ಬಂದಿಗಳು (ಮೋಟರ್ ರೀಡರ್‌ಗಳು) ಮನೆ-ಮನೆಗೆ ಭೇಟಿ ನೀಡಿ ಈ ಪರಿಶೀಲನೆ ನಡೆಸಲಿದ್ದಾರೆ. ಮರು-ನೋಂದಣಿ ಹಾಗೂ ಸ್ಥಳದಲ್ಲೇ ಸಿಬ್ಬಂದಿ ಕೇಳುವ ವಿವರಗಳ ಪರಿಶೀಲನೆಗಾಗಿ ನೀವು ಸಿದ್ಧವಾಗಿಟ್ಟುಕೊಳ್ಳಬೇಕಾದ ಅಗತ್ಯ ದಾಖಲೆಗಳ ಪಟ್ಟಿ ಇಲ್ಲಿದೆ:
ಗೃಹ ಜ್ಯೋತಿ ಮರು-ಅರ್ಜಿ ಸಲ್ಲಿಕೆಗೆ ಅಗತ್ಯವಿರುವ ದಾಖಲೆಗಳು
ನೀವು ಮನೆಯ ಮಾಲೀಕರಾಗಿರಲಿ ಅಥವಾ ಬಾಡಿಗೆದಾರರಾಗಿರಲಿ, ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ:
ಆಧಾರ್ ಕಾರ್ಡ್: ಅರ್ಜಿದಾರರ ಆಧಾರ್ ಕಾರ್ಡ್ (ಇದರ ಹೆಸರು ವಿದ್ಯುತ್ ಬಿಲ್ ಅಥವಾ ಬಾಡಿಗೆ ಒಪ್ಪಂದಕ್ಕೆ ಹೊಂದಾಣಿಕೆಯಾಗಬೇಕು).
ವಿದ್ಯುತ್ ಬಿಲ್ ಮತ್ತು ಅಕೌಂಟ್ ಐಡಿ: ನಿಮ್ಮ ಎಸ್ಕಾಂನ (BESCOM, MESCOM, HESCOM ಇತ್ಯಾದಿ) ಇತ್ತೀಚಿನ ವಿದ್ಯುತ್ ಬಿಲ್ ಹಾಗೂ ಅದರಲ್ಲಿರುವ ಗ್ರಾಹಕರ ಗುರುತಿನ ಸಂಖ್ಯೆ.
ರೇಷನ್ ಕಾರ್ಡ್: ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ವಿವರಗಳು.
ವೋಟರ್ ಐಡಿ ಕಾರ್ಡ್: ಕರ್ನಾಟಕದ ನಿವಾಸಿ ಎಂಬುದನ್ನು ಖಚಿತಪಡಿಸಿಕೊಳ್ಳಲು ಮತದಾರರ ಗುರುತಿನ ಚೀಟಿ ಕಡ್ಡಾಯಗೊಳಿಸಲಾಗುತ್ತಿದೆ.
ಪ್ಯಾನ್ ಕಾರ್ಡ್: ಆದಾಯ ತೆರಿಗೆ ಪಾವತಿದಾರರನ್ನು ಗುರುತಿಸಲು ಮತ್ತು ಅರ್ಹತೆ ಪರಿಶೀಲಿಸಲು. ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ: ಅರ್ಜಿದಾರರ ಇತ್ತೀಚಿನ ಫೋಟೋ. ಜಾತಿ ಪ್ರಮಾಣ ಪತ್ರ: ಎಸ್‌ಸಿ/ಎಸ್‌ಟಿ ವರ್ಗಕ್ಕೆ ಸೇರಿದವರಾಗಿದ್ದರೆ ಮಾತ್ರ (ಅನ್ವಯಿಸುವಲ್ಲಿ).
ಬಾಡಿಗೆದಾರರಿಗೆ ಹೆಚ್ಚುವರಿ ದಾಖಲೆಗಳು:
ಬಾಡಿಗೆ ಅಥವಾ ಲೀಸ್ ಒಪ್ಪಂದ: ಪ್ರಸ್ತುತ ನೀವು ಆ ಮನೆಯಲ್ಲಿ ವಾಸವಿದ್ದೀರಿ ಎಂಬುದಕ್ಕೆ ಪುರಾವೆ.
ಮನೆ ಮಾಲೀಕರ ಒಪ್ಪಿಗೆ ಪತ್ರ: ಮಾಲೀಕರಿಂದ ಪಡೆದ ನಿರಕ್ಷೇಪಣಾ ಪತ್ರ.
ಸ್ವಯಂ ಘೋಷಣಾ ಅಫಿಡವಿಟ್: ಪ್ರಸ್ತುತ ನಿವಾಸಿ ನಾನೇ ಎಂದು ದೃಢೀಕರಿಸುವ ಪತ್ರ.
ಅರ್ಜಿ ಸಲ್ಲಿಸುವುದು ಹೇಗೆ?
ಮನೆ-ಮನೆ ಸಮೀಕ್ಷೆ: ಇಂದಿನಿಂದ ನಿಮ್ಮ ಮನೆಗೆ ಬರುವ ಎಸ್ಕಾಂ ಸಿಬ್ಬಂದಿಗಳು ಮೊಬೈಲ್ ಆಪ್ ಮೂಲಕ ನಿಮ್ಮ ದಾಖಲೆಗಳನ್ನು ಸ್ಥಳದಲ್ಲೇ ಪರಿಶೀಲಿಸಿ ಅಪ್‌ಡೇಟ್ ಮಾಡಲಿದ್ದಾರೆ. ಅವರಿಗೆ ಪೂರ್ಣ ಸಹಕಾರ ನೀಡಿ.
ಆನ್‌ಲೈನ್ ಮೂಲಕ: ನೀವೇ ಖುದ್ದಾಗಿ ಸೇವಾ ಸಿಂಧು ಅಧಿಕೃತ ಪೋರ್ಟಲ್ sevasindhugs.karnataka.gov.in ಗೆ ಭೇಟಿ ನೀಡಿ ಆಧಾರ್ ಒಟಿಪಿ ಮೂಲಕ ಮರು-ಅರ್ಜಿ ಸಲ್ಲಿಸಬಹುದು.
ಆಫ್‌ಲೈನ್ ಮೂಲಕ: ನಿಮ್ಮ ಹತ್ತಿರದ ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ಅಗತ್ಯ ದಾಖಲೆಗಳೊಂದಿಗೆ ಭೇಟಿ ನೀಡಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ