ಸರ್ಕಾರಿ ಶಾಲೆಯ ಮೂಲಸೌಕರ್ಯಗಳ ಪರಿಶೀಲನೆ ಸಂದರ್ಭದಲ್ಲಿ ಶಾಸಕ ಎನ್.ಎ.ಹ್ಯಾರಿಸ್ ಜೊತೆಗೆ ಆಗಮಿಸಿದ ಅವರ ಬೆಂಬಲಿಗರು ನಿಂದಿಸಿ ಬೆದರಿಕೆ ಹಾಕಿದ್ದು, ಅವರನ್ನು ಶೀಘ್ರ ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ರಾಜ್ಯ ಕಾರ್ಯದರ್ಶಿ ಹಾಗೂ ಶಾಂತಿನಗರ ವಿಧಾನಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಕೆ.ಮಥಾಯಿ ಪೊಲೀಸರಿಗೆ ದೂರು ನೀಡಿದರು. ಅಶೋಕನಗರ ಪೊಲೀಸ್ ಠಾಣೆಗೆ ದೂರು ನೀಡಿ ಮಾತನಾಡಿದ ಕೆ.ಮಥಾಯಿ, “ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಾರ್ಟಿ ಪರ ಮನೆಮನೆ ಪ್ರಚಾರ ಮಾಡಿದ ಸಂದರ್ಭದಲ್ಲಿ, ಇಲ್ಲಿನ ಸರ್ಕಾರಿ ಶಾಲೆಗಳು ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಕನಿಷ್ಠ ಮೂಲಸೌಕರ್ಯಗಳು ಕೂಡ ಸರಿಯಾಗಿಲ್ಲ ಎಂದು ಜನರು ಅಳಲು ತೋಡಿಕೊಂಡರು. ಈ ಕುರಿತು ಪರಿಶೀಲನೆಗೆ ಮುಂದಾದೆವು. ನೀಲಸಂದ್ರದ ಸರ್ಕಾರಿ ಉರ್ದು ಶಾಲೆಗೆ ಶಾಸಕ ಎನ್.ಎ.ಹ್ಯಾರಿಸ್ರವರೇ ಅಧ್ಯಕ್ಷರಾಗಿದ್ದು, ಅಲ್ಲಿ ಬಾಲಕಿಯರ ಶೌಚಾಲಯಕ್ಕೆ ಸರಿಯಾದ ಬಾಗಿಲಿಲ್ಲದೇ ಹೆಣ್ಣುಮಕ್ಕಳು ಮುಜುಗರ ಅನುಭವಿಸುತ್ತಿದ್ದಾರೆ. ಶಾಂತಿನಗರದ ಇನ್ನೂ ಹಲವು ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಶೌಚಾಲಯಕ್ಕೆ ಹೋಗಬೇಕಾದ ಸಂದರ್ಭ ಬಂದರೆ, ಪಾಠ ಕೇಳುವುದನ್ನು ಅರ್ಧಕ್ಕೆ ನಿಲ್ಲಿಸಿ ತಮ್ಮ ಮನೆಗೆ ಹೋಗಿಬರಬೇಕಾಗಿದೆ. ಆಸ್ಪತ್ರೆಯೊಂದರ ಕಟ್ಟಡವು ಸಂಜೆ-ರಾತ್ರಿ ವೇಳೆ ಗಾಂಜಾ ಸೇವನೆ, ಮದ್ಯ ಸೇವನೆ ಬಳಕೆಯಾಗುತ್ತಿದೆ ಎಂಬ ಆರೋಪದ ಕುರಿತು ಪರಿಶೀಲಿಸಿದಾಗ, ಅಲ್ಲಿ ಸಾಲುಸಾಲು ಮದ್ಯದ ಬಾಟಲಿಗಳು ಕಂಡುಬಂದವು” ಎಂದು ಹೇಳಿದರು.