ಬೆಂಗಳೂರು: ಸಿಲಿಕಾನ್ ಸಿಟಿಯನ್ನೇ ಬೆಚ್ಚಿಬೀಳಿಸಿದ ಮಹಾಲಕ್ಷ್ಮೀ ಹತ್ಯೆ ಪ್ರಕರಣದ ಆರೋಪಿಯ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಎಂದು ಗೃಹಸಚಿವ ಜಿ ಪರಮೇಶ್ವರ್ ಹೇಳಿದರು.
ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರನ್ನು ಕೊಲೆ ಮಾಡಿ, 50 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಶೇಖರಣೆ ಮಾಡಲಾಗಿತ್ತು. ಈ ಪ್ರಕರಣ ದೆಹಲಿಯ ಶ್ರದ್ಧಾ ವಾಕರ್ ಕೊಲೆ ಮಾದರಿಯಲ್ಲೇ ನಡೆದಿದ್ದು, ರಾಜ್ಯವನ್ನೇ ಬೆಚ್ಚಿಬೀಳಿಸಿದೆ.
ಪ್ರಕರಣದ ತನಿಖೆಯನ್ನು ಚುರುಕುಮಾಡಿದ್ದು, ಇದೀಗ ಹತ್ಯೆ ನಂತರ ಆರೋಪಿಗಳು ಒಡಿಶಾದಲ್ಲಿ ತರೆಮರೆಸಿಕೊಂಡಿದ್ದು, ಪ್ರಕರಣವನ್ನು ಭೇದಿಸಲು ರಚಿಸಲಾದ ತಂಡಗಳನ್ನು ಅಲ್ಲಿಗೆ ಕಳುಹಿಸಲಾಗಿದೆ. ಮೂರ್ನಾಲ್ಕು ಪೊಲೀಸ್ ತಂಡಗಳನ್ನು ಅಲ್ಲಿಗೆ ಕಳುಹಿಸಲಾಗಿದೆ. ಆರೋಪಿ ತಾನು ಇರುವ ಸ್ಥಳಗಳನ್ನು ಬದಲಾಯಿಸುತ್ತಿದ್ದಾನೆ ಎಂದು ಪರಮೇಶ್ವರ್ ಮಾಹಿತಿ ನೀಡಿದರು.
ಈಗಾಗಲೇ ಪ್ರಕರಣ ಸಂಬಂಧ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಸಿಕ್ಕಾ ಮಾಹಿತಿ ಪ್ರಕಾರ ಒಡಿಶಾದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಈ ಕೃತ್ಯ ಎಸಗಿರುವ ಅನುಮಾನವಿದೆ. ಹೀಗಾಗಿ ಆತನನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.