ಡಿಸೆಂಬರ್ ಮಾಹೆಯಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಹೈದ್ರಾಬಾದ ಕರ್ನಾಟಕ ಭಾಗದ ಸಮಸ್ಯೆಗಳನ್ನು ಹಾಗೂ ಇಲ್ಲಿರುವ ಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಚರ್ಚೆಗಳಾಗಬೇಕು. ಹೀಗಂತ ಒತ್ತಾಯ ಕೇಳಿಬರುತ್ತಿದೆ.
ಅಧಿವೇಶನದಲ್ಲಿ ಹೈದ್ರಾಬಾದ ಕರ್ನಾಟಕ ಭಾಗದ ಸಮಸ್ಯೆಗಳನ್ನು ಹಾಗೂ ಇಲ್ಲಿರುವ ಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಚರ್ಚೆಗಳಾಗಬೇಕು. ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕಲಬುರಗಿ ಜಿಲ್ಲೆಯಲ್ಲಿ ಭೀಕರ ಬರಗಾಲದ ಛಾಯೆ ಮೂಡಿದೆ. ಹಿಂಗಾರು ಮತ್ತು ಮುಂಗಾರು ಬೆಳೆಗಳು ವಿಫಲವಾಗಿವೆ. ಕೇಂದ್ರ ಮತ್ತು ರಾಜ್ಯ ಅಧ್ಯಯನ ತಂಡಗಳು ಈ ಜಿಲ್ಲೆಯಲ್ಲಿ ಅಧ್ಯಯನ ನಡೆಸಿ ಪರಿಶೀಲಿಸಿ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಚರ್ಚೆಗಳು ಆಗಬೇಕು. ಹೈದ್ರಾಬಾದ ಕರ್ನಾಟಕ ಭಾಗಕ್ಕೆ ನೀಡಲಾಗಿರುವ 371(ಜೆ) ಅಡಿಯ ಮೀಸಲು ನೇಮಕಾತಿ, ಮುಂಬಡ್ತಿ ವಿಷಯಗಳ ಬಗ್ಗೆಯೂ ಸಹ ಕೂಲಂಕುಷವಾಗಿ ಚರ್ಚೆಯಾಗಬೇಕಾಗಿದೆ ಎಂದರು.
ಮುಂಬಯಿಯಿಂದ ಚೆನ್ನೈವರೆಗೆ ಇಂಡಸ್ಟ್ರೀಯಲ್ ಕಾರಿಡಾರ್ ಆರು ಪಥದ ರಸ್ತೆ ನಿರ್ಮಾಣವಾಗುತ್ತಿದ್ದು, ಈ ರಸ್ತೆಯು ಕಲಬುರಗಿ ಜಿಲ್ಲೆಯಲ್ಲಿ ಹಾಯ್ದು ಹೋಗುವಂತೆ ನಿರ್ಮಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಈ ರಸ್ತೆಯು ಅಕ್ಕಲಕೋಟ-ಅಫಜಲಪುರ-ದೇವಲಗಾಣಗಾಪುರ-ಜೇವರ್ಗಿ-ಅಂದೋಲಾ-ಶಹಾಪುರ-ಬಾಡಿಹಾಳ-ಸೈದಾಪುರದಿಂದ ಕರ್ನೂಲ್-ತಿರುಪತಿ-ಚೆನ್ನೈವರೆಗೆ ನಿರ್ಮಾಣವಾಗುತ್ತಿದೆ. ಕಲಬುರಗಿ ಜಿಲ್ಲೆಯಿಂದ ಹಾಯ್ದು ಹೋಗುವ ಇಂಡಸ್ಟ್ರೀಯಲ್ ಕಾರಿಡಾರ ರಸ್ತೆಯು ಚೆನ್ನೈ-ಮುಂಬಯಿ ಮಧ್ಯೆ 160 ಕಿ.ಮೀ. ದೂರ ಕಡಿಮೆ ಮಾಡಲಿದೆ. 2500 ಕೋಟಿ ರೂ. ವೆಚ್ಚದಲ್ಲಿ ಕರ್ನೂಲ್‍ದಿಂದ ಅಕ್ಕಲಕೋಟವರೆಗೆ ಆರು ಪಥದ ರಸ್ತೆ ನಿರ್ಮಾಣವಾಗಲಿದ್ದು, ಈಗಾಗಲೇ ಸಮೀಕ್ಷೆ ಕಾರ್ಯ ನಡೆಯುತ್ತಿದೆ ಎಂದರು.