ಚಾಮರಾಜನಗರ:ಹಿಜಾಬ್ ವಿವಾದದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, `ಪ್ರೌಢಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯವಾಗಿರುವ ಕಡೆ ವಿದ್ಯಾರ್ಥಿಗಳು ಅದನ್ನೇ ಪಾಲಿಸಬೇಕು.
ಪದವಿ ಕಾಲೇಜುಗಳಲ್ಲಿ ಸಮವಸ್ತ್ರವನ್ನೇನೂ ವಿಧಿಸಿಲ್ಲ. ಅಲ್ಲಿಗೆ ಹೋಗುವವರು ತಮ್ಮ ಇಷ್ಟದ ಉಡುಪನ್ನು ಹಾಕಿಕೊಂಡು ಹೋಗಬಹುದು. ನಮ್ಮ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಸ್ವಾತಂತ್ರ್ಯವಿದೆ. ಆದರೆ, ಇದನ್ನು ಯಾರೂ ದುರ್ಬಳಕೆ ಮಾಡಿಕೊಳ್ಳಬಾರದು. ಅದಕ್ಕೆಲ್ಲ ನಾವು ಅವಕಾಶ ಮಾಡಿಕೊಡುವುದಿಲ್ಲ' ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿಎನ್.ಅಶ್ವತ್ಥನಾರಾಯಣ ಸ್ಪಷ್ಟವಾಗಿ ಹೇಳಿದರು.
ಹಿಜಾಬ್ ವಿವಾದದ ಬಗ್ಗೆ ರಾಜ್ಯ ಹೈಕೋರ್ಟ್ ಈಗಾಗಲೇ ತನ್ನ ಮಧ್ಯಂತರ ನಿರ್ದೇಶನವನ್ನು ನೀಡಿದೆ. ಅದನ್ನು ಜಾರಿಗೊಳಿಸುವುದಷ್ಟೇ ಸರಕಾರದ ಹೊಣೆ. ಹಾಗೆಯೇ ವಿದ್ಯಾರ್ಥಿಗಳೂ ಸಹ ಶಿಕ್ಷಣದ ಕಡೆ ಗಮನ ಹರಿಸಬೇಕೇ ವಿನಾ ವಸ್ತ್ರದ ಬಗ್ಗೆಯಲ್ಲ. ಸಮವಸ್ತ್ರ ನೀತಿ 1995ರಿಂದಲೂ ಇದೆ. ಇದನ್ನೇನೂ ನಾವು ಮಾಡಿಲ್ಲ. ನಮ್ಮ ಸಮಾಜಕ್ಕೆ ಇದನ್ನೆಲ್ಲ ಮೆಟ್ಟಿ ನಿಲ್ಲುವ ಶಕ್ತಿ ಇದೆ. ಇದೇ ಪ್ರಜಾಪ್ರಭುತ್ವದ ಹೆಚ್ಚುಗಾರಿಕೆ' ಎಂದು ಅವರು ನುಡಿದರು.