ಆಧಾರ್ ಬಯೋಮೆಟ್ರಿಕ್ ಮತ್ತು ಆಧಾರ್ ವ್ಯವಸ್ಥೆಯಿಂದ ಸಂಗ್ರಹಣೆ ಮಾಡಲಾಗಿರುವ ದತ್ತಾಂಶದ ನಿರ್ವಹಣೆ ಗುತ್ತಿಗೆಯನ್ನು, ಅಮೆರಿಕಾ ಸೇರಿದಂತೆ ನಾಲ್ಕು ವಿದೇಶಿ ಕಂಪನಿಗಳಿಗೆ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಹೈಕೋರ್ಟ್ ಮಾನ್ಯ ಮಾಡಲು ನಿರಾಕರಿಸಿದೆ. ಅಲ್ಲದೆ, ಕೇಂದ್ರ ಸರ್ಕಾರದ ಕ್ರಮದ ಬಗ್ಗೆ ಸುಪ್ರೀಂ ಕೋರ್ಟ್ ಮುಂದೆ ಅರ್ಜಿ ಸಲ್ಲಿಸಿ ಪರಿಹಾರ ಪಡೆದುಕೊಳ್ಳಬಹುದು ಎಂದು ಹೈಕೋರ್ಟ್ ಸಲಹೆ ನೀಡಿದೆ. ನ್ಯಾಯಾಲಯದಲ್ಲಿ ವಾದ ಪ್ರತಿವಾದಗಳಾದವು. ನಂತರ ಅದಕ್ಕೆ ಒಪ್ಪಿದ ಅರ್ಜಿದಾರರು, ಅರ್ಜಿ ಹಿಂಪಡೆದು ಸುಪ್ರೀಂಕೋರ್ಟ್ ಮುಂದೆ ಸಲ್ಲಿಸಲಾಗುವುದು ಎಂದರು. ಆ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿ ಹಿಂಪಡೆಯಲು ಅರ್ಜಿದಾರರಿಗೆ ಅನುಮತಿ ನೀಡಿತು. ಜತೆಗೆ, ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿರುವ ಎಲ್ಲಾ ಅಂಶಗಳನ್ನು ಮುಕ್ತವಾಗಿರಿಸಲಾಗಿದೆ ಎಂದು ಸ್ಪಷ್ಟಪಡಿಸಿತು.