ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಎರಡು ವಾರಗಳ ಕಾಲ ಮುಂದೂಡಿದೆ. ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ನೇತೃತ್ವದ ನ್ಯಾಯ ಪೀಠ ಅರ್ಜಿ ವಿಚಾರಣೆಯನ್ನು ನಡೆಸಿ, ಈ ಅರ್ಜಿ ವಿಚಾರಣೆಯನ್ನು ತ್ವರಿತಗತಿಯಲ್ಲಿ ನಡೆಸುವ ಅಗತ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದೆ.
ಹೊಳೆನರಸೀಪುರ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ್ದ ಪ್ರಜ್ವಲ್ ಪರ ವಕೀಲರು, ಈ ಪ್ರಕರಣವನ್ನು ತ್ವರಿತಗತಿಯಲ್ಲಿ ಪರಿಶೀಲಿಸುವಂತೆ ನ್ಯಾಯ ಪೀಠಕ್ಕೆ ಮನವಿ ಮಾಡಿದರು.
ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯ ಪೀಠ, ಜಾಮೀನು ಅರ್ಜಿಯನ್ನು ಈಗ ಪರಿಶೀಲಿಸುವ ಅಗತ್ಯವಿಲ್ಲ. ತನಿಖೆ ಮುಂದುವರಿಯಲಿ, ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಲಿ ಎಂದು ಹೇಳಿತು.
ಈ ಹಿಂದೆ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿರುವ ಪ್ರಜ್ವಲ್ ಅವರ ಜಾಮೀನು ಅರ್ಜಿಯನ್ನು ರದ್ದುಗೊಳಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜುಲೈ 8 ರವರೆಗೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇನ್ನೂ ಯುವಕನಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದಲ್ಲಿ ಪ್ರಜ್ವಲ್ ಅವರ ಸಹೋದರ, ಜೆಡಿಎಸ್ (ಎಸ್) ಎಂಎಲ್ ಸಿ ಸೂರಜ್ ರೇವಣ್ಣ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇನ್ನೂ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಮತ್ತು ತಾಯಿ ಭವಾನಿ ರೇವಣ್ಣ ಅವರಿಗೆ ಷರತ್ತು ಬದ್ಧ ಜಾಮೀನು ನೀಡಲಾಗಿದೆ.