Publish Date: Sat, 08 Oct 2022 (18:20 IST)
Updated Date: Sat, 08 Oct 2022 (18:38 IST)
ಕರ್ನಾಟಕದ ಕರಾವಳಿ ಜಿಲ್ಲೆ ಹೊರತುಪಡಿಸಿದರೆ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆ ಚುರುಕಾಗಿದೆ. ಮುಂದಿನ ನಾಲ್ಕು ದಿನ ಉತ್ತರ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳ ಹಲವೆಡೆ ದಿನ ಬಿಟ್ಟು ದಿನ ಅಬ್ಬರದ ಮಳೆ ಆಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಿತ್ಯ ನಿರಂತರವಾಗಿ ಹವಾಮಾನದಲ್ಲಿ ಏರಿಳಿತಗಳು ಉಂಟಾಗುತ್ತಿವೆ. ಈ ಕಾರಣದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಟ ಮುಂದುವರಿದಿದೆ. ವಿವಿಧ ಪ್ರದೇಶಗಳಲ್ಲಿ ಒಂದು ದಿನ ಜೋರು ಮಳೆ ಬಂದರೆ, ಮರು ದಿನ ವಾತಾವರಣ ಸಹಜ ಸ್ಥಿತಿಗೆ ಮರಳುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ಮಳೆ ದುರ್ಬಲಗೊಂಡಿದೆ. ಇದರ ಹೊರತಾಗಿ ಮುಂದಿನ 4 ದಿನ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ದಿನ ಬಿಟ್ಟು ದಿನ ಧಾರಾಕಾರವಾಗಿ ಮಳೆ ಅಬ್ಬರಿಸಲಿದೆ. ಇಂದು ಮತ್ತು 11ರಂದು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಕೊಪ್ಪಳ, ವಿಜಯಪುರ ಮತ್ತು ಯಾದಗಿರಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.