ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರು ಕುಕ್ಕೆ ಸುಬ್ರಮಣ್ಯಕ್ಕೆ ಆಗಮಿಸಿ ದೇವರ ದರ್ಶನ ಮಾಡಿದರು. ಆಶ್ಲೇಷ ಪೂಜೆ ಸೇವೆ ಸಲ್ಲಿಸಿದರು. ಬಳಿಕ ಓಣ ದ್ರಾಕ್ಷಿ ಯಲ್ಲಿ ತುಲಾಭಾರ ಸೇವೆ ನೆರವೇರಿಸಿದರು.
ಕಳೆದ ರಾತ್ರಿ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿ ದೇವರ ದರ್ಶನ ಮಾಡಿದ್ದ ಕುಮಾರಸ್ವಾಮಿ ಹಾಗೂ ದೇವೇಗೌಡರು ಬಳಿಕ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದ್ದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಶ್ರಾವಣ ಮಾಸ ಆದ ಕಾರಣ ಮಂಜುನಾಥ ಸ್ವಾಮಿ ದರ್ಶನ ಮಾಡಿದ್ದೇನೆ. ಕಷ್ಟಗಳನ್ನು ನಿವಾರಿಸಲು ಸುಬ್ರಮಣ್ಯ ಸ್ವಾಮಿ ದರ್ಶನಕ್ಕೆ ಬಂದಿದ್ದೇವೆ.
ರಾಜ್ಯದ ರೈತರಿಗೆ ಉತ್ತಮ ಬದುಕು ಸಿಗಲಿ, ಜನರ ಸಮಸ್ಯೆ ಬಗೆಹರಿಸಲು ಶಕ್ತಿಯನ್ನು ದೇವರು ನನಗೆ ನೀಡುವಂತೆ ಪ್ರಾರ್ಥಿಸಿಕೊಳ್ಳಲು ದೇವರ ದರ್ಶನಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.
ಕುಮಾರಸ್ವಾಮಿ ಅವರೊಂದಿಗೆ ತಾಯಿ ಚೆನ್ನಮ್ಮ, ಪತ್ನಿ ಅನಿತಾ ಕುಮಾರಸ್ವಾಮಿ ಹಾಜರಿದ್ದರು. ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ನೀಡಿದ ಹಿನ್ನಲೆಯಲ್ಲಿ ಸುಬ್ರಮಣ್ಯದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.