Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಕೊನೆಯುಸಿರಿಳೆದಿದ್ದಾರೆ. ಇವರ ಸಾವಿಗೆ ಕರ್ನಾಟಕ ಸೇರಿದಂತೆ ಎಲ್ಲೆಡೆ ಸಂತಾಪ ಸೂಚಿಸಲಾಗ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಮುಲಾಯಂ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಸಂಸ್ಥಾಪಕ ನಾಯಕ ಮುಲಾಯಂ ಸಿಂಗ್ ಯಾದವ್ ಸಾವು ಆಘಾತಕಾರಿ. ಮುಲಾಯಂಸಿಂಗ್ ಉತ್ತರಪ್ರದೇಶದಲ್ಲಿ ಕೋಮುವಾದದ ವಿರುದ್ಧದ ಪ್ರಬಲ ರಾಜಕೀಯ ಶಕ್ತಿಯಾಗಿದ್ದರು. ಅವರ ಕುಟುಂಬ ಮತ್ತು ಅಭಿಮಾನಿಗಳ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ. ಮಾಜಿ ಸಿಎಂ H.D.ಕುಮಾರಸ್ವಾಮಿ ಟ್ವೀಟ್ ಮಾಡಿ, ಮುಲಾಯಂ ಜಿ ಅವರು ರಾಜಕೀಯದಲ್ಲಿ ತಮ್ಮ ಸುದೀರ್ಘ ಅವಧಿಯಲ್ಲಿ ಹಲವಾರು ಇತರ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದರು ಮತ್ತು ದೇಶಕ್ಕಾಗಿ ದಣಿವರಿಯದೆ ಕೆಲಸ ಮಾಡಿದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬದ ಸದಸ್ಯರಿಗೆ ನಷ್ಟವನ್ನು ತಡೆದುಕೊಳ್ಳುವ ಶಕ್ತಿಯನ್ನು ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.