ಬೆಂಗಳೂರು: ಮುಂಬೈಗೆ ಹೋಗಿ ಕೂತಿರುವ ಅತೃಪ್ತರನ್ನು ಹೇಗಾದರೂ ಮಾಡಿ ಕರೆತರಬೇಕೆಂದು ಜೆಡಿಎಸ್ ಮತ್ತು ಕಾಂಗ್ರೆಸ್ ಶತ ಪ್ರಯತ್ನ ಮುಂದುವರಿಸಿದೆ.
ಸೋಮವಾರ ವಿಶ್ವಾಸಮತ ಯಾಚನೆ ವೇಳೆ ಸರ್ಕಾರಕ್ಕೆ ಸೋಲಾಗದಂತೆ ನೋಡಿಕೊಳ್ಳಲು ಅತೃಪ್ತ ಶಾಸಕರನ್ನು ಕರೆತರಲು ದೇವೇಗೌಡರ ನೇತೃತ್ವದಲ್ಲಿ ಪ್ರಯತ್ನ ನಡೆದಿದೆ. ಈ ಮೊದಲು ರಾಜೀನಾಮೆ ನೀಡಿ ನಂತರ ವಾಪಸ್ ಪಡೆದ ರಾಮಲಿಂಗಾರೆಡ್ಡಿ ಜತೆ ದೇವೇಗೌಡರು ತಮ್ಮ ನಿವಾಸದಲ್ಲಿ ಭಾರೀ ಚರ್ಚೆ ನಡೆಸಿದ್ದಾರೆ.
ರಾಮಲಿಂಗಾ ರೆಡ್ಡಿ ಮೂಲಕ ಅತೃಪ್ತರನ್ನು ಕರೆತರಲು ಪ್ರಯತ್ನ ಮುಂದುವರಿದಿದೆ ಎನ್ನಲಾಗಿದೆ. ರಾಮಲಿಂಗಾ ರೆಡ್ಡಿ ಕರೆದರೆ ಈ ಅತೃಪ್ತ ಶಾಸಕರು ಮರಳಿಬರಬಹುದು ಎಂಬ ವಿಶ್ವಾಸ ನಾಯಕರದ್ದು. ಅದಕ್ಕಾಗಿ ದೇವೇಗೌಡರ ನಿವಾಸದಲ್ಲಿ ಸಿಎಂ ಕುಮಾರಸ್ವಾಮಿ ಕೂಡಾ ಉಪಸ್ಥಿತರಿದ್ದು ಮಹತ್ವದ ಚರ್ಚೆ ನಡೆಸಿದ್ದಾರೆ. ವಿಶ್ವಾಸ ಮತ ಯಾಚನೆಗೆ ಎರಡು ದಿನದ ಅವಧಿ ಸಿಕ್ಕಿದ್ದು, ಮನ ಒಲಿಕೆ, ಸಂಧಾನಕ್ಕೆ ಫಲ ಸಿಗಬಹುದಾ ಎಂದು ಕಾದು ನೋಡಬೇಕಿದೆ.