ಬೆಂಗಳೂರು : ರಾಜ್ಯದಲ್ಲಿ ಆರೋಗ್ಯ ಮೂಲಸೌಕರ್ಯದ ಬಲವರ್ಧನೆಗಾಗಿ ಹೊಸ ಮೆಡಿಕಲ್ ಕಾಲೇಜುಗಳನ್ನು ಆರಂಭಿಸುವ ಕಾರ್ಯದಲ್ಲಿ ಇನ್ನಷ್ಟು ಪ್ರಗತಿ ಕಂಡುಬಂದಿದ್ದು,
ಈಗ 500 ಕೋಟಿ ರೂ. ವೆಚ್ಚದ ಚಿತ್ರದುರ್ಗ ಮೆಡಿಕಲ್ ಕಾಲೇಜು ಆರಂಭಕ್ಕೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್, ಈ ಮಹತ್ವದ ಹೆಜ್ಜೆಯಿಂದಾಗಿ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಕಾರ್ಯಕ್ಕೆ ಮತ್ತಷ್ಟು ಆದ್ಯತೆ ದೊರೆತಿದೆ ಎಂದು ತಿಳಿಸಿದ್ದಾರೆ.
ಚಿತ್ರದುರ್ಗದ ಮೆಡಿಕಲ್ ಕಾಲೇಜನ್ನು 2023-24 ನೇ ಸಾಲಿನಿಂದ ಆರಂಭಿಸಲು ಅಗತ್ಯ ಪ್ರಕ್ರಿಯೆಗಳನ್ನು ನಡೆಸಬೇಕೆಂದು ರಾಜ್ಯ ಸರ್ಕಾರ ಸೂಚಿಸಿದೆ. ಇದಕ್ಕೆ ಪೂರಕವಾಗಿ ಸಿದ್ಧತೆ ನಡೆಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವೈದ್ಯಕೀಯ ಶಿಕ್ಷಣದಲ್ಲಿ ಸುಧಾರಣೆ ತರುತ್ತಿದ್ದು, ಈ ಹೊಸ ಕಾಲೇಜು ನಿರ್ಮಾಣ ಕೂಡ ಸುಧಾರಣೆಯ ಭಾಗವಾಗಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.